ನವದೆಹಲಿ, ಸೆ. 22 (DaijiworldNews/MB) : ರಾಜ್ಯಸಭೆಯ ಕಲಾಪದಿಂದ ಎಂಟು ಶಾಸಕರ ಅಮಾನತನ್ನು ಹಿಂಪಡೆಯುವವರೆಗೂ ವಿಪಕ್ಷಗಳು ರಾಜ್ಯಸಭೆಯ ಕಲಾಪವನ್ನು ಬಹಿಷ್ಕರಿಸಲು ಮುಂದಾಗಿದೆ.
ಮಂಗಳವಾರ ಈ ಬಗ್ಗೆ ಮೇಲ್ಮನೆಯಲ್ಲಿ ಹೇಳಿರುವ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಅವರು, ರಾಜ್ಯಸಭೆಯ ಕಲಾಪದಿಂದ ಎಂಟು ಶಾಸಕರ ಅಮಾನತನ್ನು ಹಿಂಪಡೆಯುವವರೆಗೂ ವಿಪಕ್ಷಗಳು ರಾಜ್ಯಸಭೆಯ ಕಲಾಪವನ್ನು ಬಹಿಷ್ಕರಿಸಲಿದೆ ಎಂದು ತಿಳಿಸಿದ್ದಾರೆ.
ವಿವಾದಾತ್ಮಕ ಕೃಷಿ ಸಂಬಂಧಿತ ಮಸೂದೆಗಳನ್ನು ಅಂಗೀಕರಿಸಿದಾಗ ಗದ್ದಲ ಎಬ್ಬಿಸಿದ ಕಾರಣದಿಂದಾಗಿ ರಾಜ್ಯಸಭಾ ಸದಸ್ಯರಾದ ಡೆರೆಕ್ ಒ ಬ್ರಿಯಾನ್, ಸಂಜಯ್ ಸಿಂಗ್, ರಾಜು ಸತವ್, ಕೆ.ಕೆ.ರಾಗೇಶ್, ರಿಪೂನ್ ಬೋರಾ, ಡೋಲಾ ಸೇನ್, ಸೈಯದ್ ನಜೀರ್ ಹುಸೇನ್ ಮತ್ತು ಎಲಮರನ್ ಕರೀಮ್ ಅವರನ್ನು ಸಭಾಧ್ಯಕ್ಷ ವೆಂಕಯ್ಯನಾಯ್ಡು ಅವರು ಒಂದು ವಾರ ಅಮಾನತುಗೊಳಿಸಿದ್ದಾರೆ. ಹಾಗೆಯೇ ವಿಪಕ್ಷಗಳು ಸೇರಿ ರಾಜ್ಯಸಭಾ ಉಪಸಭಾಪತಿ ಹರಿವಂಶ್ ಅವರು ಕೃಷಿ ಮಸೂದೆ ವಿರುದ್ದ ಮಾತನಾಡುವವರಿಗೆ ಅವಕಾಶ ನೀಡದೆ ಸಂಸದೀಯ ಪ್ರಕ್ರಿಯೆ ಉಲ್ಲಂಘಿಸಿದ್ದಾರೆ. ಆದ್ದರಿಂದ ಉಪಸಭಾಪತಿಯನ್ನು ಹುದ್ದೆಯಿಂದ ಕೆಳಗಿಳಿಸಬೇಕೆಂದು ಆಗ್ರಹಿಸಿ ಅವಿಶ್ವಾಸ ನಿಲುವಳಿ ಮಂಡಿಸಿದ್ದು ಇದನ್ನು ಸಭಾಧ್ಯಕ್ಷರಾದ ವೆಂಕಯ್ಯ ನಾಯ್ಡು ಅವರು ಸೋಮವಾರ ತಿರಸ್ಕರಿಸಿದ್ದಾರೆ.
ಇನ್ನು ತಮ್ಮ ಅಮಾನತನ್ನು ಖಂಡಿಸಿ ಅಮಾನತುಗೊಂಡಿರುವ ಸಂಸದರು ಸಂಸತ್ತಿನ ಸಂಕೀರ್ಣದ ಲಾನ್ನಲ್ಲಿ ಕುಳಿತು ತಮ್ಮ ಪ್ರತಿಭಟನೆ ಮುಂದುವರಿಸಿದ್ದಾರೆ. ಸೋಮವಾರದಿಂದ ಈ ಶಾಸಕರು ಧರಣಿ ಕೂತಿದ್ದು ಅನಿರ್ದಿಷ್ಟಾವಧಿ ಪ್ರತಿಭಟನೆ ಎಂದು ತಿಳಿಸಿದ್ದಾರೆ.
ಇನ್ನು ಧರಣಿ ಕೂತ ಅಮಾನತುಗೊಂಡ ಶಾಸಕರಿಗೆ ರಾಜ್ಯಸಭಾ ಉಪಸಭಾಪತಿ ಹರಿವಂಶ್ ಅವರು ಚಹಾ ಸೇವಿಸುವಂತೆ ಮನವಿ ಮಾಡಿದ್ದು ಪ್ರತಿಭಟನೆ ಕೂತ ರಾಜ್ಯ ಸಭಾ ಸದಸ್ಯರು ಚಹಾ, ಉಪಹಾರ ಸ್ವೀಕರಿಸಲು ನಿರಾಕರಿಸಿದರು.
ಚಹಾ ನೀಡಿದ ಹರಿವಂಶ್ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರು ಶ್ಲಾಘಿಸಿದ್ದು, ''ಕೆಲವು ದಿನಗಳ ಹಿಂದೆ ಅವರ ಮೇಲೆ ಹಲ್ಲೆ ನಡೆಸಿ ಅವಮಾನಿಸಿ ಈಗ ಧರಣಿ ಕೂತವರಿಗೆ ಚಹಾ ನೀಡುವ ಮೂಲಕ ಹರಿವಂಶ್ ಜಿ ಅವರು ತಮ್ಮ ವಿನಮ್ರ ಮನಸ್ಸು, ದೊಡ್ಡತನವನ್ನು ಪ್ರದರ್ಶಿಸಿದ್ದಾರೆ. ಭಾರತದ ಜನರೊಂದಿಗೆ ನಾನು ಹರಿವಂಶ್ ಜಿ ಅವರನ್ನು ಅಭಿನಂದಿಸುತ್ತೇನೆ'' ಎಂದು ಹೇಳಿದ್ದಾರೆ.
ಇನ್ನು ಇದಕ್ಕೆ ತಿರುಗೇಟು ನೀಡಿರುವ ಆಪ್ ಸದಸ್ಯ. ಅಮಾನತುಗೊಂಡಿರುವ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರು, ''ಮೋದಿಯವರೇ, ನಾವು ಚಹಾಕ್ಕಾಗಿ ಹೋರಾಡುತ್ತಿಲ್ಲ. ನಾವು ನೀವು ಕಿತ್ತುಕೊಂಡಿರುವ ರೈತರ ಕಲ್ಯಾಣಕ್ಕಾಗಿ ಹೋರಾಡುತ್ತಿದ್ದೇವೆ. ನಾವು ನಿಮ್ಮ ಚಹಾ ಆತಿಥ್ಯವನ್ನು ಗೌರವದಿಂದ ನಿರಾಕರಿಸುತ್ತೇವೆ. ದಯವಿಟ್ಟು ನಮ್ಮ ರೈತರ ಕಲ್ಯಾಣವನ್ನು ಹಿಂದಿರುಗಿಸಿ'' ಎಂದು ಹೇಳಿದ್ದಾರೆ.