ಪುದುಚೆರಿ, ಸೆ. 16 (DaijiworldNews/MB) : ಜನರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲಿ ಎಂಬ ಕಾರಣಕ್ಕೆ ಅಧಿಕಾರಿಗಳು ಹಲವು ಕ್ರಮಗಳನ್ನು ಕೈಗೊಳ್ಳುತ್ತಲೇ ಇದ್ದಾರೆ. ಈ ನಡುವೆ ಎಐಎಡಿಎಂಕೆ ಶಾಸಕರೊಬ್ಬರು ತಮ್ಮ ಕ್ಷೇತ್ರದಲ್ಲಿ ಎಲ್ಲರೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲಿ ಎಂಬ ಕಾರಣಕ್ಕೆ ಕೊರೊನಾ ಪರೀಕ್ಷೆ ಮಾಡಿಸಿಕೊಂಡವರಿಗೆ 5 ಕೆಜಿ ಅಕ್ಕಿ ಉಚಿತವಾಗಿ ನೀಡುತ್ತಿದ್ದಾರೆ.
ಹೌದು ಪುದುಚೇರಿಯ ಎಐಎಡಿಎಂಕೆ ಶಾಸಕ ಅನ್ಬಗಳನ್ ಅವರು ತಮ್ಮ ಕ್ಷೇತ್ರದಲ್ಲಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವವರಿಗೆ 5ಕೆಜಿ ಅಕ್ಕಿ ನೀಡುತ್ತಿದ್ದಾರೆ.
ಪುದುಚೇರಿಯಲ್ಲಿ ಸೋಂಕಿತರ ಸಂಖ್ಯೆ ಅಧಿಕವಾಗಿರುವ ಕಾರಣ ಜಿಲ್ಲಾಡಳಿತ ಐಸಿಎಂಆರ್ ಆದೇಶದಂತೆ ಪರೀಕ್ಷೆ ನಡೆಸಲು ಮುಂದಾಗಿದೆ. ಹೆಚ್ಚು ಸೋಂಕಿತರು ಇರುವ ಪ್ರದೇಶದಲ್ಲಿ ಆರೋಗ್ಯ ಶಿಬಿರ ನಡೆಸುತ್ತಿದೆ. ಆದರೆ ಪರೀಕ್ಷೆ ಮಾಡಿಸಿಕೊಳ್ಳಲು ಬರುವ ಜನರ ಸಂಖ್ಯೆ ಕಡಿಮೆಯಾದ ಹಿನ್ನೆಲೆ ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಶಾಸಕರು ಈ ಕ್ರಮಕ್ಕೆ ಮುಂದಾಗಿದ್ದಾರೆ.
ಶಾಸಕರ ಈ ತಂತ್ರವು ಯಶಸ್ವಿಯಾಗಿದ್ದು ಸುಮಾರು 200 ಜನರು ಪರೀಕ್ಷೆಗಳಿಗೆ ಹಾಜರಾಗಿ ಅಕ್ಕಿ ಚೀಲದೊಂದಿಗೆ ಮನೆಗೆ ವಾಪಾಸ್ ಹೋಗಿದ್ದಾರೆ ಅನ್ನುತ್ತಾರೆ ಅಲ್ಲಿನ ಅಧಿಕಾರಿಗಳು.
ಇನ್ನು ಈ 200 ಮಂದಿಯ ಪೈಕಿ 18 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ವರದಿ ತಿಳಿಸಿದೆ.