ಲೇಹ್ , ಸೆ.4(DaijiworldNews/HR): ಗಡಿ ನಿಯಂತ್ರಣ ರೇಖೆ ಬಳಿ ಪರಿಸ್ಥಿತಿಯೂ ಗಂಭೀರವಾಗಿದ್ದು, ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಭಾರತೀಯ ಸೇನಾಪಡೆಯ ಮುಖ್ಯಸ್ಥ ಎಂಎಂ ನರವಾಣೆಯವರು ತಿಳಿಸಿದ್ದಾರೆ.
ಚೀನಾವು ಭಾರತದ ಸೇನಾಪಡೆಗಳನ್ನು ಹಿಂತೆಗೆದುಕೊಳ್ಳುವ ಬಣ್ಣದ ಮಾತುಗಳನ್ನಾಡಿ, ಭಾರತದ ಭೂ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಎರಡು ಬಾರಿ ಪ್ರಯತ್ನಿಸಿದ್ದು, ಇದೀಗ ಗಡಿಯಲ್ಲಿ ಯುದ್ಧದ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದ್ದು,ಈ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಲಡಾಖ್'ಗೆ ಭೇಟಿ ನೀಡಿದ ನರವಾಣೆಯವರು ಗಡಿ ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಗುರುವಾರದಂದು ಲೇಹ್'ಗೆ ಭೇಟಿ ನೀಡಿದ್ದೆ. ಸಾಕಷ್ಟು ಪ್ರದೇಶಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳು ಹಾಗೂ ಜೆಸಿಒಗಳೊಂದಿಗೆ ಮಾತುಕತೆ ನಡೆಸಿದ್ದು, ಗಡಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯಲಾಗಿದೆ. ನಮ್ಮ ಭಾರತೀಯ ಯೋಧರಿಗೆ ಯಾವುದೇ ಸವಾಲುಗಳು ಎದುರಾದರೂ ಅದನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ನಮ್ಮ ಯೋಧರು ಅತ್ಯುತ್ತಮರು ಎಂದು ಹೇಳಿದ್ದಾರೆ.
ಇದೀಗ ಗಡಿ ನಿಯಂತ್ರಣ ರೇಖೆ ಬಳಿಕ ವಾತಾವರಣ ತುಂಬಾ ಗಂಭೀರವಾಗಿದ್ದು, ಈ ಬಗ್ಗೆ ಗಂಭೀರವಾಗಿ ಚಿಂತನೆಗಳನ್ನು ನಡೆಸಲಾಗುತ್ತಿದ್ದು, ನಮ್ಮ ಭದ್ರತಾಪಡೆಗಳೂ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಪರಿಸ್ಥಿತಿ ಬದಲಾಗುವ ಲಕ್ಷಣಗಳಿಲ್ಲ. ಹೀಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.