ಬೆಂಗಳೂರು, ಸೆ.4(DaijiworldNews/HR): ಯುವ ಕಾಂಗ್ರೆಸ್ ವತಿಯಿಂದ ದೇಶದಾದ್ಯಂತ ಯುವಕರಿಗೆ ಉದ್ಯೋಗ ನೀಡಿ ಆತ್ಮಹತ್ಯೆ ತಡೆಗಟ್ಟಿ ಅಭಿಯಾನ ನಡೆಸಲು ಉದ್ದೇಶಿಸಿದ್ದು, ಇದಕ್ಕೆ ಕರ್ನಾಟಕದಿಂದ ಚಾಲನೆ ನೀಡುತ್ತಿದ್ದೇವೆ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಹೇಳಿದ್ದಾರೆ.
ಈ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಆತ್ಮಹತ್ಯೆ ನಿಲ್ಲಿಸಿ ಅಭಿಯಾನದ ಭಿತ್ತಿಪತ್ರವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ದೇಶದಲ್ಲಿ ಶೇ 65ರಷ್ಟು ಯುವಕರು ಉದ್ಯೋಗ ಇಲ್ಲದೆ ಬೀದಿಗಳಲ್ಲಿ ಅಡ್ಡಾಡುತ್ತಿದ್ದಾರೆ ಮತ್ತು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಹಾಗಾಗಿ ಕೇಂದ್ರ ಸರ್ಕಾರ ಉದ್ಯೋಗ ನೀಡಲು ವಿಫಲವಾಗಿದೆ' ಎಂದು ದೂರಿದ್ದಾರೆ.
ಮೋದಿಯ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದು ಆರು ವರ್ಷ ಆಯಿತು. ಅವರು ನೀಡಿದ ಭರವಸೆಯಂತೆ 12 ಕೋಟಿ ಜನರಿಗೆ ಉದ್ಯೋಗ ಸಿಗಬೇಕಿತ್ತು. ಆದರೆ ಮೋದಿ ಸರ್ಕಾರ ಕೆಲಸ ಕೊಡುವ ಬದಲು ಇರುವ ಕೆಲಸವನ್ನು ಕಿತ್ತುಕೊಳ್ಳುತ್ತಿದೆ. ಕೆಲಸ ಇಲ್ಲದೆ ಸಾಕಷ್ಟು ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ' ಎಂದರು.
ಇನ್ನು ಜಿಡಿಪಿ ಕುಸಿತ ಕಾಣಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಾರಣರಾಗಿದ್ದು, 'ಮುಂದಿನ ದಿನಗಳಲ್ಲಿ ಎಲ್ಲ ಸಚಿವರು ಮತ್ತು ಸಂಸದರ ಮನೆ ಎದುರು ಉದ್ಯೋಗ ಕೊಡಿ ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುವುದು ಖಂಡಿತ ಎಂದಿದ್ದಾರೆ.
ಇನ್ನು ಡ್ರಗ್ಸ್ ವಿರುದ್ಧ ಯುವ ಕಾಂಗ್ರೆಸ್ ಮೊದಲಿನಿಂದ ಹೋರಾಟ ಮಾಡುತ್ತಿದ್ದು, ಈ ಹಿಂದೆ ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳಲ್ಲೂ ಡ್ರಗ್ಸ್ ಹಾವಳಿಯ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಿತ್ತು. ಇದೀಗ ರಾಜ್ಯದಲ್ಲಿಯೂ ಈ ಬಗ್ಗೆ ಸುದ್ದಿಯಾಗುತ್ತಿದೆ. ಈ ದಂಧೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವ ಮೂಲಕ ಯುವಕರನ್ನು ರಕ್ಷಿಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.