ಬೆಳಗಾವಿ, ಆ 29(DaijiworldNews/HR): ಬೆಳಗಾವಿಯ ಪೀರನವಾಡಿಯಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ವಿವಾದಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ನನ್ನೊಂದಿಗೆ ತಿಳಿಸಿದ್ದಾರೆ ಎಂಬುದಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಈ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವಿವಾದ ಬಗೆಹರಿಯುವುದಕ್ಕೆ ಮುಂಚೆಯೇ ಸಚಿವರೊಂದಿಗೆ ಚರ್ಚಿಸಿದ್ದೇನೆ. ಯಾರ್ಯಾರ ಮೇಲೆ ಪ್ರಕರಣವಿ ಅವೆಲ್ಲವನ್ನೂ ವಾಪಸ್ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.
ಪ್ರತಿಮೆ ವಿವಾದ ಇಷ್ಟು ಸುಲಭವಾಗಿ ಇತ್ಯರ್ಥ ಆಗುತ್ತದೆ ಮತ್ತು ಸಂಘರ್ಷಗಳಿಲ್ಲದೆ ಮಹಾನಾಯಕರಿಗೆ ಗೌರವ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಶಿವಾಜಿ ಹಾಗೂ ರಾಯಣ್ಣ ಹೋರಾಟ ಸ್ಮರಣೀಯ. ಇಬ್ಬರೂ ಮಹಾಪುರುಷರು ದೇಶಕ್ಕಾಗಿ ಹೋರಾಡಿದವರು ಎಂದರು.
ಇನ್ನು ಕೆಲ ಸಂಕುಚಿತ ಭಾವನೆಯಿಂದ ರಾಯಣ್ಣ ಹಾಗೂ ಶಿವಾಜಿ ಬೇರೆ ಬೇರೆ ಎನ್ನುವ ಭಾವನೆ ರಾಜ್ಯದಲ್ಲಿ ಬಂದಿತ್ತು. ಆದರೆ, ಬೆಳಗಾವಿಯಲ್ಲಿ ಆಗಿರುವ ತೀರ್ಮಾನದಿಂದ ಎಲ್ಲ ರಾಷ್ಟ್ರ ಭಕ್ತರಿಗೆ ಸಂತೋಷ ತಂದಿದೆ ಎಂದು ಹೇಳಿದರು.
ರಾಯಣ್ಣ ಹಾಗೂ ಶಿವಾಜಿ ಯಾವ ಜಾತಿಯವರು ಮತ್ತು ಎಲ್ಲಿ ಹುಟ್ಟಿ ಬೆಳೆದರು ಹಾಗೂ ಅವರ ಭಾಷೆಗಳಾವುದು ಎನ್ನುವುದು ಇಲ್ಲಿ ಮುಖ್ಯವಾಗುವುದಿಲ್ಲ. ಇಬ್ಬರೂ ಜಾತಿ, ಪ್ರಾಂತ್ಯ ಹಾಗೂ ಭಾಷೆ ಎಲ್ಲವನ್ನೂ ಮೀರಿದ ಮಹಾಪುರುಷರು. ಅವರನ್ನು ಗೌರವದಿಂದ ನೋಡಬೇಕು ಎಂಬ ಸಂದೇಶವನ್ನು ಬೆಳಗಾವಿಯಿಂದ ಇಡೀ ದೇಶಕ್ಕೆ ರವಾನಿಸಿರುವುದು ಮಾದರಿಯಾಗಿದೆ ಎಂದಿದ್ದಾರೆ.