ನವದೆಹಲಿ, ಆ 29 (DaijiworldNews/PY): ಸುಮಾರು 30 ವರ್ಷಗಳ ಕಾಲ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ್ದ ಯುದ್ದ ನೌಕೆ ಐಎನ್ಎಸ್ ವಿರಾಟ್ ಅನ್ನು ಗುಜರಾತ್ನ ಭವ್ ನಗರದಲ್ಲಿ ಕಳಚಿ ಗುಜರಿಗೆ ಹಾಕಲಾಗುತ್ತಿದೆ.
ಐಎನ್ಎಸ್ ವಿರಾಟ್ ಅನ್ನು ಗುಜರಾತ್ನ ಅಲಂಗ್ಗೆ ಕೊಂಡೊಯ್ದು ಅಲ್ಲಿಂದ ಮುಂದಿನ ತಿಂಗಳು ಕಳಚಿ ಗುಜರಿಗೆ ಹಾಕಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
1987ರಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡು ಹೆಚ್ಚುಕಾಲ ಸೇವೆ ಸಲ್ಲಿಸಿದ್ದ ನೌಕೆಯನ್ನು ಮೆಟಲ್ ಸ್ಕ್ರ್ಯಾಪ್ ಟ್ರೇಡ್ ಕಾರ್ಪೊರೇಷನ್ ಲಿಮಿಟೆಡ್ ಕಳೆದ ತಿಂಗಳು ನಡೆಸಿದ ಹರಾಜಿನಲ್ಲಿ ಶ್ರೀರಾಮ್ ಗ್ರೂಪ್ 38.54 ಕೋಟಿಗೆ ಖರೀದಿಸಿತು.
ನವೆಂಬರ್ 1959ರಿಂದ ಎಪ್ರಿಲ್ 1984ರವರೆಗೆ ಎಚ್ಎಂಎಸ್ ಹರ್ಮಿಸ್ ಸೇವೆ ಸಲ್ಲಿಸಿದ್ದು, ಬಳಿಕ ಅದನ್ನು ನಿವೃತ್ತಿಗೊಳಿಸಲಾಯಿತು. ಇದಾದ ನಂತರ 1987ರ ಮೇ 12ರಂದು ಭಾರತೀಯ ನೌಕಾಪಡೆಗೆ ನಿಯೋಜಿಸಲಾಯಿತು.
ಐಎನ್ಎಸ್ ವಿರಾಟ್ ಯುದ್ದ ನೌಕೆಯು, 1989ರಲ್ಲಿ ಶ್ರೀಲಂಕಾದಲ್ಲಿ ಶಾಂತಿ ಸ್ಥಾಪನೆಗಾಗಿ ನಡೆದ ಆಪರೇಷನ್ ಜುಪಿಟರ್, 1999ರ ಕಾರ್ಗಿಲ್ ಯುದ್ಧದ ವೇಳೆ ನಡೆದ ಆಪರೇಷನ್ ವಿಜಯ್ ಕಾರ್ಯಾಚರಣೆಗಳಲ್ಲಿ ಪ್ರಮುಖ ಕಾರ್ಯವಹಿಸಿದೆ.