ನವದೆಹಲಿ, ಆ. 24 (DaijiworldNews/SM): ಹಾಲಿ ಎ ಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷರಾಗಿ ಮುಂಡುವರೆದಿದ್ದಾರೆ. ಮುಂದಿನ ಆರು ತಿಂಗಳಲ್ಲಿ ಪಕ್ಷಕ್ಕೆ ನೂತನ ಅಧ್ಯಕ್ಷರ ನೇಮಕವಾಗಲಿದೆ. ಈ ಬಗ್ಗೆ ಸೋಮವಾರ ಸುಮಾರು ಏಳು ಗಂಟೆಗಳ ಕಾಲ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯೂಸಿ) ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ.
ಕಾಂಗ್ರೆಸ್ ಸಿಡಬ್ಲ್ಯೂಸಿ ಸಭೆ ಹಲವು ಸನ್ನಿವೇಶಗಳಿಗೆ ಪಾತ್ರವಾಯಿತು. ಕಾಂಗ್ರೆಸ್ ನಾಯಕತ್ವದಲ್ಲಿ ಬದಲಾವಣೆಯಾಗುವುದು ಅಗತ್ಯ ಇದೆ ಎಂದು ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್ ಸೇರಿದಂತೆ 23 ಹಿರಿಯ ಕಾಂಗ್ರೆಸ್ಸಿಗರು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದ ವಿಚಾರ ಈ ಸಭೆಯಲ್ಲಿ ಚರ್ಚೆಯಾಯಿತು. ಆದರೆ, ಸದ್ಯ ಸೋನಿಯಾ ಗಾಂಧಿಯವರೇ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.
ಇನ್ನು ಮುಂದಿನ ಸಿಡಬ್ಲ್ಯೂಸಿ ಸಭೆಯಲ್ಲಿ ನೂತನ ಅಧ್ಯಕ್ಷರನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಅಲ್ಲಿಯವರೆಗೂ ಸೋನಿಯಾ ಅವರೇ ಹಂಗಾಮಿಯಾಗಿ ಮುಂದುವರೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಇನ್ನು ಈ ಮಧ್ಯೆ ಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಕಾಂಗ್ರೆಸ್ ದೊಡ್ಡ ಕುಟುಂಬವಿದ್ದಂತೆ. ತನಗೆ ಯಾರ ವಿರುದ್ಧವೂ ದ್ವೇಷ ಇಲ್ಲ. ಆದರೆ, ಪಕ್ಷದ ವೇದಿಕೆಯಲ್ಲಿ ಮಾತ್ರವೇ ಅಭಿಪ್ರಾಯ ವ್ಯಕ್ತಪಡಿಸಿ ಎಂದಿದ್ದಾರೆ.