ಚಿಕ್ಕಮಗಳೂರು, ಆ 22 (DaijiworldNews/PY): ಸಂಘ ಪರಿವಾರದವರು ಕೊಲೆ ಆರೋಪಿಗಳು ಎಂದು ಹೇಳಿರುವ ಸಿದ್ದರಾಮಯ್ಯ ಅವರ ಟ್ವೀಟ್ಗೆ ತಿರುಗೇಟು ನೀಡಿರುವ ಪ್ರವಾಸೋಧ್ಯಮ ಸಚಿವ ಸಿ.ಟಿ.ರವಿ ಅವರು, ಐದು ವರ್ಷ ನೀವು ಅಧಿಕಾರದಲ್ಲಿದ್ದ ಸಂದರ್ಭ ಸಂಘವನ್ನು ನಿಷೇಧ ಮಾಡಲು ನಿಮಗೆ ಅಂದು ಧೈರ್ಯ ಇರಲಿಲ್ಲವೇ ಎಂದು ಕೇಳಿದ್ದಾರೆ.
ನಗರದ ತಮ್ಮ ಮನೆಯಲ್ಲಿ ಮಾತನಾಡಿರುವ ಅವರು, ನಾನು ಸಂಘದ ಸ್ವಯಂ ಸೇವಕನಾಗಿದ್ದು, ಶಾಸಕ, ಸಚಿವನಾಗಿದ್ದೇನೆ. ಹಾಗೆಯೇ ನರೇಂದ್ರ ಮೋದಿ ಅವರೂ ಕೂಡಾ ಪ್ರಧಾನ ಮಂತ್ರಿಯಾಗಿರುವುದು. ದೇಶಭಕ್ತಿ ಹಾಗೂ ಸಂಸ್ಕಾರವನ್ನು ಸಂಘ ಕಲಿಸಿಕೊಡುತ್ತದೆ. ಒಂದು ವೇಳೆ ಟೀಕೆ ಮಾಡುವವರ ಹತ್ಯೆ ಮಾಡುವಂತೆ ಹೇಳಿಕೊಡುತ್ತಿದ್ದರೆ ಭೂಮಿ ಮೇಲೆ ಯಾರು ಜೀವಿಸುತ್ತಿರಲಿಲ್ಲ ಎಂದಿದ್ದಾರೆ.
ಗಾಂಧಿ ಹತ್ಯೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಮುಖಂಡರು ಗಾಂಧಿ ಹತ್ಯೆಗೆ ಸಂಘವೇ ಕಾರಣ ಎಂದಿದ್ದರು. ಆದರೆ, ಆ ವೇಳೆ ಕಪೂರ್ ಕಮಿಷನ್ ಗಾಂಧಿ ಹತ್ಯೆಯಾಗಿರುವುದಕ್ಕೂ ಹಾಗೂ ಆರ್ಎಸ್ಎಸ್ಗೆ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂದು ಹೇಳಿದ್ದರು. ಪ್ರಸ್ತುತ ನೀವು ಇದೇ ರೀತಿಯಾದ ಆರೋಪವನ್ನು ಮಾಡುತ್ತಿದ್ದೀರಿ. ಮೊದಲು ಇಂತಹ ಸುಳ್ಳು ಆರೋಪ ಮಾಡುವುದನ್ನು ಬಿಟ್ಟುಬಿಡಿ ಎಂದು ಹೇಳಿದ್ದಾರೆ.
ಇನ್ನು ಟ್ವೀಟ್ ಸಂಬಂಧಿಸಿದಂತೆ ಮಾತನಾಡಿದ ಅವರು, ನಿಮ್ಮ ಟ್ವಿಟ್ಟರ್ ಖಾತೆಯನ್ನು ನಿರ್ವಹಿಸುವವನಿಗೆ ವಾಸ್ತವಿಕದ ಬಗ್ಗೆ ಟ್ವೀಟ್ ಮಾಡಲು ತಿಳಿಸಿ. ಇಲ್ಲವಾದಲ್ಲಿ ನಿಮಗೆ ಕೆಟ್ಟ ಹೆಸರು ಬರುತ್ತದೆ. ಸಂಘ ವಿರೋಧಿಗಳಿಗೆ ನಿಮ್ಮ ಟ್ವಿಟ್ಟರ್ ಖಾತೆಯನ್ನು ನೀಡಿ ಕೆಟ್ಟವನೆಂದು ಅನ್ನಿಸಿಕೊಳ್ಳಬೇಡಿ ಎಂದು ಸಲಹೆ ನೀಡಿದರು.
ನೀವು ಸಂಘವನ್ನು ಟೀಕಿಸುವ ಮುನ್ನ ಸಂಘ ಮಾಡಿರುವ ಕೆಲಸಗಳ ಬಗ್ಗೆ ತಿಳಿದುಕೊಳ್ಳಿ. ನಿಮಗೆ ಏಕಲವ್ಯ ವಿದ್ಯಾಲಯ, ಸರಸ್ವತಿ ಶಿಶು ಮಂದಿರ ಎನ್ನುವ ಬಗ್ಗೆ ತಿಳಿದಿದೆಯೇ. ಈ ಎರಡು ವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡಿರುವವರು ಭಯೋತ್ಪಾದಕರಾಗಿಲ್ಲ. ಬದಲಾಗಿ ಅವರು ದೇಶಭಕ್ತರಾಗಿದ್ದಾರೆ. ಅಲ್ಪಸ್ಪಲ್ಪ ತಿಳುವಳಿಕೆ ಹೊಂದಿದವರು ಸಮಾಜವನ್ನು ಒಡೆಯುವ ಕಾರ್ಯಕ್ಕೆ ಮುಂದಾಗುತ್ತಾರೆ ಎಂದಿದ್ದಾರೆ.