ಹಾವೇರಿ, ಆ. 15 (DaijiworldNews/MB) : ''ನಾನು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರ ಎಲ್ಲಾ ಪ್ರಕರಣಗಳನ್ನು ಕೈ ಬಿಡುವುದಾಗಿ ಹೇಳಿಲ್ಲ. ಮನವಿ ಸಲ್ಲಿಸಿದ ಮಾತ್ರಕ್ಕೆ ವಿಎಚ್ಪಿಯ ಎಲ್ಲಾ ಪ್ರಕರಣ ತೆಗೆದುಹಾಕುವುದಿಲ್ಲ'' ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ''ವಿಎಚ್ಪಿಯ ಎಲ್ಲಾ ಪ್ರಕರಣ ತೆಗೆದುಹಾಕುವುದಾಗಿ ನಾನು ಹೇಳಿಲ್ಲ. ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ ವಿಎಚ್ಪಿ ಮುಖಂಡರು ಮನವಿ ಪತ್ರ ಸಲ್ಲಿಸಿದ್ದಾರೆ. ಯಾರಿಗೆ ಅನ್ಯಾಯವಾಗಿದ್ದರೂ ಕೂಡಾ ಮನವಿ ಪತ್ರ ಸಲ್ಲಿಸುವ ಕೆಲಸ ನನ್ನದು. ಈ ಹಿಂದಿನ ಸರ್ಕಾರವೂ ಕೂಡಾ ಕೆಲವು ಸಂಘಟನೆಗಳ ಪ್ರಕರಣ ಕೈ ಬಿಟ್ಟಿದೆ. ಆದರೆ ನಾವು ನಿಜವಾಗಿ ಕಾನೂನು ಏನಿದೆ ಅದರಂತೆ ನ್ಯಾಯ ನೀಡುತ್ತೇವೆ'' ಎಂದು ಹೇಳಿದ್ದಾರೆ.
ಈ ಹಿಂದೆ ಮಂಗಳೂರಿನಲ್ಲಿ ಸಂಘಪರಿವಾರದ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ್ದ ಅವರು, ''ನಿಮ್ಮ ಮೇಲೆ ಯಾವುದೇ ಕ್ರಿಮಿನಲ್ ಕೇಸ್ ಹಾಕಿದ್ರೂ, ಎಲ್ಲ ತೆಗೆದು ಹಾಕುತ್ತೇವೆ'' ಎಂದು ಹೇಳಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿವಾದ ಸೃಷ್ಟಿಸಿದೆ.
ಇನ್ನು ಇದೇ ಸಂದರ್ಭದಲ್ಲಿ ಮಾಧ್ಯಮಗಳು ರಾಜ್ಯದಲ್ಲೂ ಯುಪಿ ಮಾದರಿಯನ್ನು ಅನುಕರಣೆ ಮಾಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ''ಈಗಾಗಲೇ ಸುಪ್ರೀಂ ಕೋರ್ಟ್ ಗಲಭೆಕೋರರು ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡಿದರೆ ಅವರಿಂದಲ್ಲೇ ಅದನ್ನು ವಸೂಲಿ ಮಾಡಲು ಸೂಚಿಸಿದೆ. ಆ ಪ್ರಕಾರವಾಗಿ ಗಲಭೆ ಮಾಡಿದವರ ಆಸ್ತಿ ಮುಟ್ಟುಗೋಲು ಹಾಕಿ, ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣದಲ್ಲಿ ಸಮಾಜದ ಸ್ವಾಸ್ಥ್ಯಕ್ಕೆ ಹಾನಿ ಉಂಟು ಮಾಡುವ ಪೋಸ್ಟ್ಗಳ ನಿಯಂತ್ರಣ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಮುಂದಿನ ವಾರದಲ್ಲಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರ ಸಭೆ ಕರೆಯಲಾಗಿದೆ. ಪೋಸ್ಟ್ಗಳನ್ನು ಪರಿಶೀಲನೆ ನಡೆಸಿ ಪ್ರಕಟನೆ ಮಾಡವಂತೆ ಸೂಚಿಸಲಾಗುತ್ತದೆ. ಈ ಬಗ್ಗೆ ಮುಖ್ಯಸ್ಥರು ನೀಡುವ ಪ್ರತಿಕ್ರಿಯೆಗೆ ಅನುಗುಣವಾಗಿ ಕ್ರಮ ತೆಗೆದುಕೊಳ್ಳಲಾಗುತ್ತದೆ'' ಎಂದು ಹೇಳಿದರು.
''ರಾಜ್ಯದಲ್ಲಿ ಪ್ರಸ್ತುತ 4 ಎನ್ಡಿಆರ್ಎಫ್ ತಂಡಗಳಿದ್ದು ಇನ್ನೂ ನಾಲ್ಕು ತಂಡಗಳನ್ನು ಕಳುಹಿಸಲು ಕೇಂದ್ರ ಸಮ್ಮತಿಸಿದೆ'' ಎಂದು ಹೇಳಿದ ಅವರು, ''ಪ್ರವಾಹ ನಿರ್ವಹಣಗಾಗಿ ಅಂತರ್ ರಾಜ್ಯ ಮಟ್ಟದಲ್ಲಿ ಕ್ವಿಕ್ ರೆಸ್ಪಾನ್ಸ್ ಸಿಸ್ಟಮ್ ಅನುಷ್ಟಾನ ಮಾಡಲು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ'' ಎಂದು ಕೂಡಾ ತಿಳಿಸಿದ್ದಾರೆ.
ಇನ್ನು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸುತ್ತಿರುವ ಡಿಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ ಅವರು, ''ಡಿಕೆಶಿ ಅವರಿಗೆ ಕಾನೂನು ತಿಳಿದಿದೆ ಎಂದು ನಾನು ಭಾವನೆ. ಗಲಭೆ ನಡೆಸಿದವರಿಗೆ ಕಾನೂನು ಪ್ರಕಾರವಾಗಿ ನೊಟೀಸ್ ನೀಡಿ, ವಿಚಾರಣೆ ನಡೆಸಿ, ಕ್ರಮಕೈಗೊಳ್ಳಲಾಗುತ್ತದೆ. ಅದರ ಬದಲಾಗಿ ನೊಟೀಸ್ ನೀಡಿ ಯಾರನ್ನೂ ಕೂಡಾ ಹೆದರಿಸುವ ಪ್ರಶ್ನೆಯೇ ಇಲ್ಲ'' ಎಂದು ಹೇಳಿದರು.