ಬೆಂಗಳೂರು, ಆ 15(DaijiworldNews/HR): ರಾಷ್ಟ್ರದಲ್ಲಿ ಬದಲಾವಣೆ ಬೇಕಿದ್ದು, ಇಲ್ಲಿರುವ ವಿಷ ಬೀಜವನ್ನು ಕಿತ್ತುಹಾಕಿ ಮುಂದಿನ ದಿನಗಳಲ್ಲಿ ಕೆಂಪುಕೋಟೆಯಲ್ಲಿ ನಾವು ಭಾಷಣ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಭವನದಲ್ಲಿ ನಡೆದ 74ನೇ ಸ್ವಾತಂತ್ರೋತ್ಸವದ ಆಚರಣೆಯಲ್ಲಿ ಮಾತನಾಡಿದ ಅವರು, ಗಾಂಧೀಜಿಯವರ ತತ್ವಗಳನ್ನು ನಾವೆಲ್ಲರು ಅನುಸರಿಸಬೇಕು ಮತ್ತು ಸ್ವಾತಂತ್ರ್ಯಕ್ಕಾಗಿ ಪ್ರಾಣಕೊಟ್ಟವರನ್ನು ಸ್ಮರಿಸಬೇಕು. ದೇಶದೆಲ್ಲೆಡೆ ಆಗುವ ಅಸಮಾನತೆ ನಿವಾರಿಸಿ ಸಮಾನತೆ ಸಾಧಿಸಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದು ದೇಶದ ಐಕ್ಯತೆಯನ್ನು ನಾವು ಉಳಿಸಬೇಕಿದೆ ಎಂದು ಹೇಳಿದರು.
ಇಂದು ಸಂವಿಧಾನಕ್ಕೆ ಅಪಚಾರವಾಗಿತ್ತಿದ್ದು, ಸಂವಿಧಾನದ ಮೇಲೆ ಬಿಜೆಪಿಯವರಿಗೆ ಕನಿಷ್ಠ ಬೆಲೆಯಿಲ್ಲದೆ ಅದನ್ನು ಒಡೆಯಲು ಹೊರಟಿದ್ದಾರೆ. ಹೀಗಾಗಿ ಕೋಮುವಾದಿಗಳಿಂದ ಸ್ವಾತಂತ್ರ್ಯ ಪಡೆಯಬೇಕಾಗಿದೆ.
ಬಿಜೆಪಿಯವರು ಕೋಮುವಾದ ಮತ್ತು ದೇಶದಲ್ಲಿ ದ್ವೇಷದ ಬೀಜ ಬಿತ್ತುತ್ತಿದ್ದು, ಈ ವಿಷ ಬೀಜವನ್ನು ನಾವು ಕಿತ್ತುಹಾಕಿ ರಾಷ್ಟ್ರದಲ್ಲಿ ಮತ್ತೊಂದು ಬದಲಾವಣೆ ಯುವಜನತೆಯ ಮೂಲಕ ಆಗಬೇಕಿದೆ ಎಂದು ಹೇಳಿದರು.
ಬಿಜೆಪಿ ಸರ್ಕಾರದ ವೈಫಲ್ಯ ಮುಚ್ಚಿಹಾಕಲು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆತಾ ಇದೆ. ಇದಕ್ಕೆ ಉದಾಹರಣೆ ಎಂಬಂತೆ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗುಂಪು ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ನ ಪಾಲಿಕೆ ಸದಸ್ಯರಿಗೆ ನೋಟಿಸ್ ನೀಡಿ ಬೆದರಿಸುವ ಪ್ರಯತ್ನ ನಡೆಯುತ್ತಿದ್ದು,. ಇದನ್ನು ನೋಡಿಕೊಂಡು ನಾವು ಕೈ ಕಟ್ಟಿ ಕೂರುವುದಿಲ್ಲ ಘಟನೆಯ ಸತ್ಯ ಶೋಧನೆಗೆ ಕಾಂಗ್ರೆಸ್ ಈಗಾಗಲೇ ಮೂರು ಮಂದಿ ಮಾಜಿ ಗೃಹ ಸಚಿವರ ಸಮಿತಿಯನ್ನು ರಚಿಸಿದೆ ಎಂದು ಸರ್ಕಾರದ ವಿರುದ್ದ ಅಸಮಧಾನ ವ್ಯಕ್ತಪಡಿಸಿದರು.