ಬೆಂಗಳೂರು, ಜೂ 21 (DaijiworldNews/PY) : ಸಮಾಜದಲ್ಲಿ ಜನರ ಸ್ವಾಸ್ಥ್ಯ ಕಾಪಾಡುವಲ್ಲಿ ಯೋಗದ ಕೊಡುಗೆ ದೊಡ್ಡದು ಎಂದು ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಬೆಳಿಗ್ಗೆ 6ರಿಂದಲೇ ಲಾಲ್ಬಾಗ್ನಲ್ಲಿ ಸಾರ್ವಜನಿಕರು ಯೋಗದ ವಿವಿಧ ಆಸನಗಳನ್ನು ಪ್ರದರ್ಶನ ಮಾಡಿ ಯೋಗ ದಿನದ ಆಚರಣೆಗೆ ಚಾಲನೆ ನೀಡಲಾಯಿತು.
ಯೋಗ ದಿನಕ್ಕೂ ಮುನ್ನ ಹುತಾತ್ಮ ಯೋಧರಿಗೆ ಸಂತಾಪ ಸೂಚಿಸಿ ಬಳಿಕ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿನ ಮಹತ್ವ ಪದ್ದತಿ ಎಂದರೆ ಅದು ಯೋಗ. ಯೋಗವು ಕೂಡಾ ವಿಜ್ಞಾನ, ಗಣಿತದಂತೆ ಭಾರತವು ಜಗತ್ತಿಗೆ ನೀಡಿದ ಪ್ರಮುಖವಾದ ಕೊಡುಗೆಯಾಗಿದೆ. ಯೋಗವು ಮನಸ್ಸು ಹಾಗೂ ಬುದ್ದಿಯ ಮೂಲಕ ಭಗವಂತನನ್ನು, ಮೋಕ್ಷವನ್ನು ಕಾಣುವ ಪದ್ದತಿಯಾಗಿದೆ ಎಂದು ತಿಳಿಸಿದ್ದಾರೆ.
ಭಾನುವಾರ ನಗರದಲ್ಲಿ ಸರಳವಾಗಿ ಯೋಗ ದಿನ ಆಚರಿಸಲಾಯಿತು. ಕೊರೊನಾ ಹಿನ್ನೆಲೆ ಬಹುತೇಕ ಮಂದಿ ಮನೆಯಲ್ಲಿಯೇ ಯೋಗ ಮಾಡಿದರು. ಉದ್ಯಾನದಲ್ಲಿ ಕೆಲವು ಸಂಘ-ಸಂಸ್ಥೆಗಳ ಸದಸ್ಯರು ನಿರ್ದಿಷ್ಟ ಅಂತರ ಕಾಯ್ದುಕೊಂಡು ಯೋಗಾಸನ ಮಾಡಿದರು. ನಗರದ ಬಿಜೆಜಿ ಕಚೇರಿಯಲ್ಲಿಯೂ ಸರಳವಾಗಿ ಯೋಗ ದಿನವನ್ನು ಆಚರಿಸಲಾಗಿದ್ದು, ಅಂತರ ಕಾಯ್ದುಕೊಂಡು ಯೋಗಾಸನ ಮಾಡಿದರು.
ಕೆಲವು ಶಾಲೆಗಳು ವಾಟ್ಸ್ಆ್ಯಪ್ ಗ್ರೂಪ್ ರಚನೆ ಮಾಡಿದ್ದು, ಯೋಗಾಸನ ಮಾಡಿ ಅದನ್ನು ಚಿತ್ರೀಕರಿಸಿ ಗ್ರೂಪ್ನಲ್ಲಿ ಹಾಕುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿತ್ತು. ಸೂಚನೆಯಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ವಿಡಿಯೋ ಮಾಡಿ ಗ್ರೂಪ್ನಲ್ಲಿ ಹಾಕಿದ್ದಾರೆ.