ಇಂಫಾಲ್, ಜೂ.18 (DaijiworldNews/MB) : ಮಣಿಪುರದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆ ಸಂಭವಿಸಿದ್ದು ಮೂವರು ಬಿಜೆಪಿ ಶಾಶಕರು ಸೇರಿದಂತೆ 9 ಶಾಸಕರು ಬಿಜೆಪಿ ಸರ್ಕಾರದಿಂದ ಹೊರ ನಡೆದ ಬಳಿಕ ಬಿಜೆಪಿ ಸರ್ಕಾರವು ತೀವ್ರ ಬಿಕ್ಕಟ್ಟಿನಲ್ಲಿ ಸಿಲುಕಿದ್ದು ಕಾಂಗ್ರೆಸ್ ಸರ್ಕಾರ ರಚಿಸಲು ವಿಶ್ವಾಸ, ಅವಿಶ್ವಾಸ ನಿರ್ಣಯ ಮಂಡನೆಗೆ ಸಿದ್ಧತೆ ನಡೆಸುತ್ತಿದೆ.
ರಾಜ್ಯಪಾಲರು ಕಾಂಗ್ರೆಸ್ ಪಕ್ಷವನ್ನು ಸರ್ಕಾರ ರಚಿಸಲು ಆಹ್ವಾನಿಸುತ್ತಾರೆ ಎಂದು ವಿಶ್ವಾಸ ಹೊಂದಿದ್ದು ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಒ.ಇಬೊಬಿ ಸಿಂಗ್, ರಾಜ್ಯಪಾಲರಾದ ಡಾ.ನಜ್ಮಾ ಹೆಪ್ತುಲ್ಲಾ ಅವರಲ್ಲಿ ಬಿಜೆಪಿ ಸರ್ಕಾರ ಬಹುಮತ ಸಾಬೀತು ಪಡಿಸುವಂತೆ ಸೂಚಿಸವಂತೆ ಒತ್ತಾಯಿಸುವುದಾಗಿ ಹೇಳಿದ್ದಾರೆ.
ಸದ್ಯ ಕಾಂಗ್ರೆಸ್ನೊಂದಿಗೆ 27 ಶಾಸಕರಿದ್ದು, ನಾಲ್ವರು ಎನ್ಪಿಪಿ ಶಾಸಕರು, ಎಐಟಿಸಿ ಮತ್ತು ಪಕ್ಷೇತರ ಶಾಸಕ ಸೇರಿ ಒಟ್ಟು 33 ಶಾಸಕರ ಬೆಂಬಲವನ್ನು ಹೊಂದಿದೆ. ಬಿಜೆಪಿಯ ಮೂವರು ಶಾಸಕರು ಪಕ್ಷದಿಂದ ಹೊರಬಂದ ಬಳಿಕ 23 ಶಾಸಕರು ಬಿಜೆಪಿಯಲ್ಲಿ ಇದ್ದಾರೆ.
ಇನ್ನು ಬಿಜೆಪಿಯ ಮೂವರು ಶಾಸಕರಾದ ಸ್ಯಾಮ್ಯುಯೆಲ್ ಜೆಂಡೈ, ಟಿಟಿ ಹಾಕಿಪ್, ಸುಭಾಷ್ ಚಂದ್ರ ಅವರು ಕಾಂಗ್ರೆಸ್ ಸೇರಿದ್ದು ಅವರನ್ನು ಮಾಜಿ ಮುಖ್ಯಮಂತ್ರಿ ಓ ಸಿ ಇಬೊಬಿ ಮತ್ತು ಇತರ ಕಾಂಗ್ರೆಸ್ ನಾಯಕರು ಔಪಚಾರಿಕವಾಗಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
ನಾಲ್ವರು ರಾಷ್ಟ್ರೀಯ ಪೀಪಲ್ಸ್ ಪಾರ್ಟಿ (ಎನ್ಪಿಪಿ)ಯ ಶಾಸಕ, ಉಪ ಮುಖ್ಯಮಂತ್ರಿ ವೈ. ಜಾಯ್ಮಾರ್ ಸಿಂಗ್, ಎಲ್. ಜಯ ಜಯಂತಕುಮಾರ್ ಸಿಂಗ್, ಎನ್. ಕಾಯಿಸಿ ಮತ್ತು ಲೆಟ್ಪಾವೊ ಹಾಕಿಪ್ ಮಂತ್ರಿ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಟಿಎಂಸಿ ಶಾಸಕ ಟಿ. ರೋಬಿಂದ್ರೊ ಸಿಂಗ್ ಮತ್ತು ಪಕ್ಷೇತರ ಶಾಸಕ ಆಶಾಬುದ್ದೀನ್ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದುಕೊಂಡಿದ್ದಾರೆ.
2017ರಲ್ಲಿ ನಡೆದ ಚುನಾವಣೆ ವೇಳೆ 60 ಸದಸ್ಯ ಬಲದ ಮಣಿಪುರ ವಿಧಾನಸಭೆಯ 28 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದು ಅತಿದೊಡ್ಡ ಪಕ್ಷವಾಗಿದ್ದು ಬಿಜೆಪಿ 21 ಸ್ಥಾನ ಗಳಿಸಿತ್ತು. ಎನ್ಪಿಪಿ–4, ಎನ್ಪಿಎಫ್–4, ಟಿಂಎಂಸಿ–1, ಪಕ್ಷೇತರರೊಬ್ಬರು ಸೇರಿದಂತೆ ಇತರರು 11 ಸ್ಥಾನಗಳಿಸಿದ್ದರು.