ನವದೆಹಲಿ, ಜೂ 17 (Daijiworld News/MSP): ಕಳೆದ 45 ವರ್ಷಗಳ ಬಳಿಕ ಭೀಕರ ಗಡಿ ಬಿಕ್ಕಟ್ಟಿಗೆ ಭಾರತ - ಚೀನಾ ಸಾಕ್ಷಿಯಾಗಿದೆ. ಭಾರತ ಚೀನಾ ನಡುವಣ ನೈಜ ನಿಯಂತ್ರಣ ರೇಖೆ ಹಾದುಹೋಗುವ ಪೂರ್ವ ಲಡಾಕ್ ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ನಡೆಸಿದ ದೈಹಿಕ ಘರ್ಷಣೆಯಲ್ಲಿ ಭಾರತದ ಓರ್ವ ಸೇನಾಧಿಕಾರಿ ಸೇರಿದಂತೆ 20 ಮಂದಿ ಸೈನಿಕರು ಹುತಾತ್ಮರಾಗಿದ್ಧಾರೆ.
ಭಾರತದ ಹುತಾತ್ಮ ಯೋಧರಿಗೆ ಟ್ವೀಟ್ ಮೂಲಕ ಸಂತಾಪ ಸೂಚಿಸಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮೌನವಹಿಸಿರುವುದೇಕೆ? ಎಂದು ಪ್ರಶ್ನಿಸಿದ್ಧಾರೆ.
"ನಮ್ಮ ಸೈನಿಕರನ್ನು ಕಳೆದುಕೊಂಡ ಬಗ್ಗೆ ನನಗಾದ ದುಃಖವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ನಮ್ಮ ಯೋಧರು ಹುತಾತ್ಮರಾಗಿದ್ದಾರೆ. ಎಲ್ಲಾ ಪ್ರೀತಿಪಾತ್ರರಿಗೆ ಸಂತಾಪ ಸೂಚಿಸುತ್ತೇನೆ. ಈ ಸಂಕಷ್ಟದ ಸಂದರ್ಭದಲ್ಲಿ ಹುತಾತ್ಮ ಯೋಧರ ಕುಟುಂಬಗಳೊಂದಿಗೆ ನಾವು ನಿಲ್ಲುತ್ತೇವೆ " ಎಂದರು ಟ್ವೀಟ್ ಮಾಡಿದ್ದಾರೆ ರಾಹುಲ್.
ಇದಲ್ಲದೆ ಮತ್ತೊಂದು ಟ್ವೀಟ್ ಮಾಡಿರುವ ರಾಹುಲ್ ಅವರು , ಗಡಿ ತಿಕ್ಕಾಟದ ಬಗ್ಗೆ ಮೋದಿ ಮೌನದ ಬಗ್ಗೆ ಪ್ರಶ್ನಿಸಿದ್ದಾರೆ. " ನಡೆದಿದ್ದು ನಡೆದುಹೋಗಿದೆ, ಆದರೆ ಪ್ರಸ್ತುತ ಏನಾಗುತ್ತಿದೆ ಎನ್ನುವುದು ನಮಗೆ ಹೇಳಿ, ಈ ಬಗ್ಗೆ ಪ್ರಧಾನಿ ಮೋದಿ ಮೌನವಾಗಿರುವುದೇಕೆ? ಪ್ರಧಾನಿ ಮುಚ್ಚಿಡುತ್ತಿದ್ದಾರೆ? ನಮ್ಮ ಸೈನಿಕರನ್ನು ಹತ್ಯೆ ಮಾಡಲು ಚೀನಾಗೆ ಎಷ್ಟು ಧೈರ್ಯ? ನಮ್ಮ ಜಾಗವನ್ನು ವಶಪಡಿಸಿಕೊಳ್ಳಲು ಚೀನಾಗೆ ಎಷ್ಟು ಧೈರ್ಯ? ಎಂದು ಸರಣಿ ಪ್ರಶ್ನೆಗಳನ್ನು ಟ್ವೀಟ್ ಮಾಡುವ ಮೂಲಕ ಸದ್ಯದ ಸ್ಥಿತಿಗತಿಯ ಬಗ್ಗೆ ತಿಳಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಒತ್ತಾಯ ಮಾಡಿದ್ದಾರೆ.