ಲಡಾಕ್, ಜೂ 16 (Daijiworld News/MSP): ಪೂರ್ವ ಲಡಾಕ್ ಗಡಿ ಭಾಗದಲ್ಲಿ ಭಾರತದ ಸೇನೆ ವಿರುದ್ಧ ಚೀನಾ ಗುಂಡಿನ ದಾಳಿ ನಡೆಸಿದ್ದು ಈ ವೇಳೆ ಭಾರತೀಯ ಸೇನೆಯ ಓರ್ವ ಅಧಿಕಾರಿ ಹಾಗೂ ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಪೂರ್ವ ಲಡಾಖ್ನ ಗಲ್ವಾನ್ ಪ್ರಾಂತ್ಯದಲ್ಲಿ ಸೋಮವಾರ ರಾತ್ರಿ ನಡೆದ ಸಂಘರ್ಷದಲ್ಲಿ ಭಾರತದ ಮೂವರು ಯೋಧರು ಹುತಾತ್ಮರಾಗಿದ್ದಾರೆ ಎಂದು ಹಿರಿಯ ಸೇನಾಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತ ಗಡಿ ಭಾಗದ ಒಳಗೆ ಚೀನಾ ಸೈನಿಕರು ಅತಿಕ್ರಮ ಪ್ರವೇಶ ಮಾಡಿದ್ದರು. ಇದರಿಂದಾಗಿ ಕಳೆದ ರಾತ್ರಿ ಭಾರತೀಯ ಯೋಧರು ಚೀನಾ ಸೈನಿಕರನ್ನು ನಿಯಂತ್ರಿಸಲು ಮುಂದಾಗಿದ್ದರು. ಈ ಸಂದರ್ಭ ನೂಕಾಟ, ತಳ್ಳಾಟ ನಡೆದಿತ್ತು. ಹಿಂದೆ ಸರಿಯುವಂತೆ ಎಚ್ಚರಿಕೆ ನೀಡಿದರೂ ಚೀನಾ ಸೈನಿಕರು ಉದ್ದಟತ ತೋರಿದ್ದರು ಇದರಿಂದಾಗಿ ಉಭಯ ಸೈನಿಕರ ನಡುವೆ ಸಂಘರ್ಷ ಶುರುವಾಗಿತ್ತು.
ಚೀನಾ ಮತ್ತು ಭಾರತ ಗಡಿ ವಿವಾದದಲ್ಲಿ ನೂಕಾಟ ಮತ್ತು ತಳ್ಳಾಟ ನಡೆಯುವುದು ಸಾಮಾನ್ಯವಾಗಿತ್ತು. ಆದರೆ ಎಂದೂ ಗುಂಡಿನ ದಾಳಿ ನಡೆದಿರಲಿಲ್ಲ. 45 ವರ್ಷಗಳ ಬಳಿಕ ಭಾರತ-ಚೀನಾ ನಡುವೆ ನಡೆದ ಗುಂಡಿನ ಚಕಮಕಿಯಿಂದ ಪೂರ್ವ ಲಡಾಖ್ನ ಗಡಿ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ತಲೆದೋರಿದ್ದು, ಕದನ ಕಾರ್ಮೋಡಗಳು ದಟ್ಟವಾಗುತ್ತಿವೆ.