ನವದೆಹಲಿ, ಜೂ.10 (DaijiworldNews/MB) : ಈಗಾಗಲೇ ಊರಿಗೆ ವಾಪಾಸ್ ಆಗಿರುವ ಹಾಗೂ ಇನ್ನಷ್ಟೇ ವಾಪಾಸ್ ಆಗಲಿರುವ ವಲಸೆ ಕಾರ್ಮಿಕರಿಗೆ ಹೊಸ ಉದ್ಯೋಗ ಅವಕಾಶಗಳನ್ನು ಒದಗಿಸಿಕೊಡಿ ಎಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ.
ಊರಿಗೆ ಮರಳಲು ಇಚ್ಛಿಸುವ ಎಲ್ಲ ವಲಸೆ ಕಾರ್ಮಿಕರನ್ನು 15 ದಿನಗಳಲ್ಲಿ ಕಳುಹಿಸಲು ವ್ಯವಸ್ಥೆ ಕಲ್ಪಿಸಬೇಕು. ಅವರಿಗೆ ಇರುವ ಉದ್ಯೋಗ ಅವಕಾಶಗಳನ್ನು ಗುರುತಿಸಲು ಗ್ರಾಮ ಮತ್ತು ತಾಲ್ಲೂಕು ಮಟ್ಟದಲ್ಲಿ ಆಪ್ತಸಮಾಲೋಚನೆ ಕೇಂದ್ರಗಳ ಪ್ರಾರಂಭ ಮಾಡಬೇಕು. ಊರಿಗೆ ಮರಳಿರುವ ವಲಸೆ ಕಾರ್ಮಿಕರ ಕೌಶಲ್ಯದ ಮಾಹಿತಿ ಸಂಗ್ರಹಿಸಬೇಕು ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ತ್ರಿಸದಸ್ಯ ಪೀಠವು ತಿಳಿಸಿದೆ.
ಇನ್ನು ವಲಸೆ ಕಾರ್ಮಿಕರ ನೋಂದಣಿಗೆ ಸ್ಥಳೀಯ ಅಥವಾ ಪೊಲೀಸ್ ಠಾಣೆ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕು. ವಲಸೆ ಕಾರ್ಮಿಕರ ಸಂಚಾರಕ್ಕಾಗಿ ರಾಜ್ಯವು ರೈಲಿನ ಬಗ್ಗೆ ಪ್ರಸ್ತಾಪ ಮಾಡಿದ 24 ಗಂಟೆಯಲ್ಲಿ ರೈಲ್ವೆಯು ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು. ವಲಸೆ ಕಾರ್ಮಿಕರ ವಿರುದ್ಧ ವಿಕೋಪ ನಿರ್ವಹಣೆ ಕಾಯ್ದೆ ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳ ರದ್ದತಿ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ನಿರ್ದೇಶಿಸಿದೆ.