ಬೆಂಗಳೂರು, ಜೂ 03 (DaijiworldNews/PY) : ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು 868 ಕೋಟಿ ಪಿಂಚಣಿ ಹಣ ಬಿಡುಗಡೆ ಮಾಡಿದ್ದು, ಇದರೊಂದಿಗೆ ಪ್ರತೀ ತಿಂಗಳು ನಿವೃತ್ತರು ಪಡೆಯುವ ಪಿಂಚಣಿ ಭಾಗಶಃ ಮೊತ್ತವನ್ನು ಮುಂಗಡವಾಗಿ ಒಂದೇ ಕಂತಿನಲ್ಲಿ ಪಡೆದುಕೊಳ್ಳುವ ಫಲಾನುಭವಿಗಳಿಗೆ 105 ಕೋಟಿ ಬಾಕಿ ಹಣ ಬಿಡುಗಡೆ ಮಾಡಿದೆ.
ಈ ಹಿಂದೆ ಒಂದೇ ಕಂತಿನಲ್ಲಿ ಭಾಗಶಃ ಮೊತ್ತವನ್ನು ಪಡೆದುಕೊಳ್ಳಲು ಅವಕಾಶವಿರಲಿಲ್ಲ. ಇಪಿಎಸ್ನಡಿ ಪಿಂಚಣಿದಾರರ ಅನುಕೂಲಕ್ಕಾಗಿ ಈ ಕ್ರಮವನ್ನು ಕೈಗೊಂಡಿದೆ.
ಉದ್ಯೋಗಿಗಳ ಪಿಂಚಣಿ ಯೋಜನೆಯಡಿ ಇಪಿಎಫ್ಒನ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯ ಶಿಫಾರಸ್ಸಿನ ಮೇರೆಗೆ ಪ್ರತೀ ತಿಂಗಳಿನ ಪಿಂಚಣಿಯ ಒಂದು ಮೂರಾಂಶದಷ್ಟು ಮೊತ್ತವನ್ನು 15 ವರ್ಷಗಳವರೆಗೆ ಕಡಿತಗೊಳಿಸಿ, ನೌಕರರು ನಿವೃತ್ರಾಗುವ ಸಂದರ್ಭ ಒಂದೇ ಗಂಟಿನಲ್ಲಿ ಪಡೆದುಕೊಳ್ಳುವ ನೌಕರರ ಬಹುವರ್ಷಗಳ ಬೇಡಿಕೆಗೆ ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ.
ತನ್ನ 135 ಪ್ರಾದೇಶಿಕ ಕಚೇರಿಗಳ ಮೂಲಕ ಇಪಿಎಫ್ಒ 65 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರನ್ನು ಹೊಂದಿದ್ದು, ಲಾಕ್ಡೌನ್ ಸಂದರ್ಭದಲ್ಲೂ ಇಪಿಎಫ್ಒ ಸಿಬ್ಬಂದಿ ಮೇ ತಿಂಗಳಿನ ಪಿಂಚಣಿಯ ಪಾವತಿಯನ್ನು ನಿಗದಿತ ಸಮಯದಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.