ವಿಶಾಖಪಟ್ಟಣ, ಮೇ 07 (Daijiworld News/MB) : ಗುರುವಾರ ವಿಶಾಖಪಟ್ಟಣದಲ್ಲಿ ನಡೆದಿರುವ ಅನಿಲ ದುರಂತವು 20ನೇ ಶತಮಾನದ ವಿಶ್ವದ ಅತೀ ಭೀಕರ ಘಟನೆಗಳಲ್ಲಿ ಒಂದಾದ ಭೋಪಾಲ್ ಅನಿಲ ದುರಂತವನ್ನು ನೆನಪಿಸಿದೆ.
ಪ್ರಜ್ಞೆ ತಪ್ಪಿ ನೆಲ್ಲದಲ್ಲೇ ಬಿದ್ದಿರುವ ಜನರು, ಮಕ್ಕಳನ್ನು ಎತ್ತಿಕೊಂಡು ಓಡುತ್ತಿರುವ ಹೆತ್ತವರು, ಜನರ ರಕ್ಷಣೆ ಬರುತ್ತಿರುವ ಆರೋಗ್ಯ ಕಾರ್ಯಕರ್ತರು, ಸತ್ತು ಬಿದ್ದಿರುವ ಪ್ರಾಣಿ ಪಕ್ಷಿಗಳು ಇವೆಲ್ಲವೂ ಗುರುವಾರ ವಿಶಾಖಪಟ್ಟದಲ್ಲಿ ಕಂಡು ಬಂದ ದೃಶ್ಯವಾಗಿದ್ದು ಇವೆಲ್ಲವೂ ಭೋಪಾಲ್ ದುರಂತದ ನೆನಪಿಗೆ ಕಾರಣವಾಗಿದೆ.
1984ರ ಡಿಸೆಂಬರ್ 2ರ ಮಧ್ಯರಾತ್ರಿ ಮಧ್ಯಪ್ರದೇಶದ ಭೋಪಾಲ್ನ ಯೂನಿಯನ್ ಕಾರ್ಬೈಡ್ ಪೆಸ್ಟಿಸೈಡ್(ಅಮೆರಿಕನ್ ಕಂಪನಿ) ಘಟಕದಲ್ಲಿ 30 ಟನ್ನುಗಳಿಗೂ ಅಧಿಕ ಪ್ರಮಾಣದಲ್ಲಿ ಮಿಥೈಲ್ ಐಸೋಸೈನೇಟ್ ಅನಿಲ ಸೋರಿಕೆಯಾಗಿದ್ದು ಈ ದುರಂತದಲ್ಲಿ 15 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಹಾಗೆಯೇ ಸುಮಾರು ಆರು ಲಕ್ಷಕ್ಕೂ ಅಧಿಕ ಜನರಿಗೆ ಅದರ ದುಷ್ಪರಿಣಾಮ ಉಂಟಾಗಿತ್ತು. ಇಂದಿಗೂ ಅದರ ದುಷ್ಪರಿಣಾಮವನ್ನು ಜನರು ಅನುಭವಿಸುತ್ತಿದ್ದಾರೆ.
ವಿಶಾಖ ಪಟ್ಟಣದ ಕಾರ್ಖಾನೆಯಲ್ಲಿ ಸೋರಿಕೆಯಾಗಿರುವ ಅನಿಲ ಸಿಂಥೆಟಿಕ್ ರಬ್ಬರ್ ಮತ್ತು ರೆಸಿನ್ಸ್ ಮಾಡಲು ಬಳಸುವ ಸ್ಟೈರೆನ್ ಆಗಿದ್ದು ಇದನ್ನು ಎಥಿನೈಲ್ಬೆನ್ಜೀನ್, ವಿನೈಲ್ಬೆನ್ಜೀನ್ ಎಂದು ಕರೆಯಲಾಗುತ್ತದೆ. ಈ ಅನಿಲವನ್ನು ಉಸಿರಾಡಿದಾಗ ಕಣ್ಣು ಉರಿ ಬಂದು, ಗಂಟಲು ಮತ್ತು ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು. ಮತ್ತೆ ಉಸಿರಾಟದ ತೊಂದರೆಗಳು ಉಂಟಾಗುತ್ತದೆ. ಹೆಚ್ಚಾಗಿ ಈ ಗ್ಯಾಸ್ನ್ನು ಉಸಿರಾಡಿದಾಗ ದೇಹದ ಮುಖ್ಯ ನರ ವ್ಯವಸ್ಥೆಗೆ ಘಾಸಿಯಾಗಬಹುದು. ಹಾಗೆಯೇ ಸುಸ್ತು, ಅಶಕ್ತಿ, ಖಿನ್ನತೆ, ಕಿವುಡು ಇತ್ಯಾದಿ ಬಾಧಿಸಬಹುದು ಎಂದು ಎನ್ಡಿಆರ್ಎಫ್ ನಿರ್ದೇಶಕ ಎಸ್ ಎನ್ ಪ್ರಧಾನ್ ಹೇಳಿದ್ದಾರೆ.