ಕಲಬುರ್ಗಿ, ಎ.30 (Daijiworld News/MB) : ಕಲಬುರಗಿಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ಏರಿಕೆಯಾಗುತ್ತಲ್ಲೇ ಇರುವ ಕಾರಣದಿಂದಾಗಿ ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಏನಾದ್ರು ಮಾಡಿ, ಒಟ್ಟಿನಲ್ಲಿ ಕೊರೊನಾ ನಿಯಂತ್ರಣಕ್ಕೆ ತನ್ನಿ ಎಂದು ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸಿ.ಎಂ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ಸಂಸದ ಡಾ.ಉಮೇಶ ಜಾಧವ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ ಅವರೊಂದಿಗೆ ಚರ್ಚೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ಯಾರಾದರೂ ರಾಜ್ಯ ಸರ್ಕಾರದ ಕ್ರಮದ ಬಗ್ಗೆ ಟೀಕೆ ಮಾಡಿದರೆ ಅದನ್ನು ಗಮನಕ್ಕೆ ತೆಗೆದುಕೊಳ್ಳುವುದು ಬೇಡ. ನಾವು ಕೆಲಸಕ್ಕೆ ಗಮನ ಹರಿಸೋಣ, ಮೊದಲು ಕೊರೊನಾದ ಸಮಸ್ಯೆಯನ್ನು ಬಗೆಹರಿಸೋಣ, ಅದುವೇ ನಮ್ಮ ಮೊದಲ ಗುರಿಯಾಗಿರಲಿ ಎಂದು ಸಲಹೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ನಮ್ಮ ವಲಸೆ ಕಾರ್ಮಿಕರು ಬೇರೆ ಭಾಗಗಳಲ್ಲಿ ಬಾಕಿಯಾಗಿದ್ದು ಅವರನ್ನು ಮರಳಿ ತವರಿಗೆ ಕರೆದುಕೊಂಡು ಬರಬೇಕು. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಮುಖ್ಯಮಂತ್ರಿಗೆ ತಿಳಿಸಿದ್ದು ಇದಕ್ಕೆ ಪ್ರತಿಕ್ರೆಯ ನೀಡಿದ ಮುಖ್ಯಮಂತ್ರಿ ಈಗಾಗಲೇ ಅವರು ಇದ್ದ ಜಾಗದಲ್ಲಿ 28 ದಿನ ಮುಗಿಸಿದ್ದಾರೆ. ಇನ್ನು ಮುಂಜಾಗ್ರತಾ ಕ್ರಮವಾಗಿ ಅವರ ತಪಾಸಣೆ ನಡೆಸಿ ತವರಿಗೆ ಕರೆತರಲು ವಿಶೇಷ ಸಾರಿಗೆ ವ್ಯವಸ್ಥೆ ಮಾಡಲು ಚಿಂತನೆ ನಡೆಸಿದ್ದೇವೆ. ಅವರು ಊರಿಗೆ ಬಂದ ಬಳಿಕವೂ ಕ್ವಾರಂಟೈನ್ಗೆ ಒಳಗಾಗಬೇಕು. ಈ ಕುರಿತಾಗಿ ಸಂಜೆಯೊಳಗೆ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.