ನವದೆಹಲಿ, ಎ.30 (DaijiworldNews/PY) : ಎಂಎಸ್ಎಂಇಗಳಿಗೆ ಏಪ್ರಿಲ್ ತಿಂಗಳಿಗೆ ವೇತನಗಳು ಮತ್ತು ಸಂಬಳವನ್ನು ಪಾವತಿಸಲು ಕೇಂದ್ರ ಸರ್ಕಾರ ಒಂದು ಲಕ್ಷ ಕೋಟಿ ರೂಪಾಯಿಗಳ ವೇತನ ಸುರಕ್ಷತಾ ನೆರವು ನೀಡಬೇಕು ಮತ್ತು ಎಂಎಸ್ಎಂಇಗಳಿಗೆ 1 ಲಕ್ಷ ಕೋಟಿ ರೂಪಾಯಿಗಳ ಸಾಲ ಖಾತರಿ ನಿಧಿ ಒದಗಿಸಬೇಕು ಎಂದು ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ಈ ಕುರಿತು ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪ್ರಿಲ್ 30 ತಿಂಗಳ ಕೊನೆಯ ಕೆಲಸದ ದಿನ. ಎಪ್ರಿಲ್ ತಿಂಗಳ ಸಂಬಳ ಬರುತ್ತದೋ ಇಲ್ಲವೋ ಎಂದು ಜನರು ಆತಂಕದಲ್ಲಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರವು ಒಂದು ಲಕ್ಷ ಕೋಟಿ ರೂಪಾಯಿಗಳ ವೇತನ ಸುರಕ್ಷತಾ ನೆರವನ್ನು ಎಂಎಸ್ಎಂಇಗಳಿಗೆ ಎಪ್ರಿಲ್ ತಿಂಗಳಿಗೆ ವೇತನಗಳು ಹಾಗೂ ಸಂಬಳವನ್ನು ಪಾವತಿಸಲು ನೀಡಬೇಕು ಹಾಗೂ ಒಂದು ಲಕ್ಷ ಕೋಟಿ ರೂಪಾಯಿಗಳ ಸಾಲ ಖಾತರಿ ನಿಧಿಯನ್ನು ಎಂಎಸ್ಎಂಇಗಳಿಗೆ ನೀಡಬೇಕು. ಇದರಿಂದ ಎಂಎಸ್ಎಂಇಗಳು ಬ್ಯಾಂಕ್ನಿಂದ ಸಾಲ ಪಡೆಯಲು ಸಹಾಯವಾಗುತ್ತದೆ ಎಂದರು.
ಸುಮಾರು 11 ಕೋಟಿ ಜನರು 6.3 ಕೋಟಿ ಎಂಎಸ್ಎಂಇಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಲಾಕ್ಡೌನ್ ಕಾರಣದಿಂದ ಇದರಲ್ಲಿ ಅನೇಕರು ಎಪ್ರಿಲ್ ತಿಂಗಳಲ್ಲಿ ಒಂದು ದಿನವೂ ಕೆಲಸ ಮಾಡಿಲ್ಲ. ಉದ್ಯಮಗಳ ವೇತನ ಹಾಗೂ ಸಂಬಳವನ್ನು ನೀಡಲು ಆಗದ ಕಾರಣದಿಂದ 11 ಕೋಟಿ ಜನರ ಜಿವನೋಪಾಯ ಸದ್ಯ ಅಪಾಯದಲ್ಲಿದೆ ಎಂದು ತಿಳಿಸಿದರು.