ಬೆಂಗಳೂರು, ಎ.30 (Daijiworld News/MB) : ಕನ್ನಡ ಸುದ್ದಿವಾಹಿನಿಯೊಂದರ ಕ್ಯಾಮೆರಾಮನ್ಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆ ಅವರ ಸಂಪರ್ಕಕ್ಕೆ ಬಂದ ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಈ ನಾಲ್ವರು ಸಚಿವರು 14 ದಿನಗಳ ಕಾಲ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಕೊರೊನಾ ಸೋಂಕು ದೃಢಪಟ್ಟ ಕ್ಯಾಮೆರಾಮಾನ್ ಈ ನಾಲ್ವರನ್ನು ಸಂದರ್ಶನ ಮಾಡಿದ್ದು ಈ ನಾಲ್ವರ ವರದಿಯು ನೆಗೆಟಿವ್ ಬಂದಿದೆ. ಆದರೆ ಮುಂಜಾಗ್ರತಾ ಕ್ರಮವಾಗಿ ಈ ನಾಲ್ವರು ಸಚಿವರು ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, "ನಾನು ಕೋವಿಡ್-19 ಗಂಟಲು ದ್ರವ ಪರೀಕ್ಷೆ ಮಾಡಿಸಿದ್ದು ಅದು ನೆಗೆಟಿವ್ ಬಂದಿರುತ್ತದೆ, ನಾನು ಆರೋಗ್ಯದಿಂದಿದ್ದು, ಸ್ವತಃ ಕ್ವಾರೆಂಟೈನ್ ಗೆ ಒಳಗಾಗಿದ್ದೇನೆ" ಎಂದು ತಿಳಿಸಿದ್ದಾರೆ.
ಹಾಗೆಯೇ ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ಟ್ವೀಟ್ ಮಾಡಿ, "ಕೋವಿಡ್19 ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿರಬಹುದೆಂಬ ಮಾಹಿತಿ ಪಡೆದಿದ್ದು, ನಾನು ಹೋಂ ಕ್ವಾರಂಟೈನ್ ಆಗಿರುತ್ತೇನೆ. ನನ್ನ ಟೆಸ್ಟ್ ನೆಗೆಟಿವ್ ಬಂದಿದ್ದು, ಜಾಗರೂಕತೆಗಾಗಿ ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತೇನೆಂದು ತಿಳಿಸ ಬಯಸುತ್ತೇನೆ" ಎಂದು ತಿಳಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು "ಕೋವಿಡ್19 ಪಾಸಿಟಿವ್ ಬಂದಿರುವ ಟಿವಿ ಪತ್ರಕರ್ತರ ಜೊತೆ ನಾನು ಕೂಡ ಸಂಪರ್ಕಕ್ಕೆ ಬಂದಿರುವ ವಿಷಯ ಗೊತ್ತಾದ ಹಿನ್ನಲೆಯಲ್ಲಿ, ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದೇನೆ, ನೆಗೆಟಿವ್ ಬಂದಿದೆ. ಹಾಗಿದ್ದರೂ, ಮುನ್ನೆಚ್ಚರಿಕೆಯಿಂದ 7 ದಿನ ನನ್ನ ಮನೆಯಲ್ಲೆ ಕ್ವಾರಂಟೈನ್ ನಲ್ಲಿರಲು ನಿರ್ಧರಿಸಿದ್ದೇನೆ, ಅಲ್ಲಿಂದಲೇ ಕರ್ತವ್ಯವನ್ನು ನಿರ್ವಹಿಸುತ್ತೇನೆ" ಎಂದು ಟ್ವೀಟಿಸಿದ್ದಾರೆ.
ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ಟ್ವೀಟ್ ಮಾಡಿದ್ದು, "ಸುದ್ದಿವಾಹಿನಿಯ ಕ್ಯಾಮೆರಾಮ್ಯಾನ್ ಒಬ್ಬರಿಗೆ ಕೊರೊನಾ ದೃಢಪಟ್ಟಿದೆ. ನಾನು ಸಭೆಯ ಸಂದರ್ಭದಲ್ಲಿ ಅವರ ಸಂಪರ್ಕಕ್ಕೆ ಬಂದಿಎ. ಆ ಕಾರಣದಿಂದಾಗಿ ನಾನು ಕೊರೊನಾ ಪರೀಕ್ಷೆಗೆ ಒಳಗಾದೆ. ನನ್ನ ಪರೀಕ್ಷಾ ವರದಿಯು ನೆಗೆಟಿವ್ ಬಂದಿದೆ ಎಂದು ನಿಮಗೆ ತಿಳಿಸಲು ಸಂತೋಷ ಪಡುತ್ತೇನೆ" ಎಂದು ಹೇಳಿದ್ದಾರೆ.