ನವದೆಹಲಿ, ಎ.28 (Daijiworld News/MB) : ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿರುವ ಸುಮಾರು 350 ತಬ್ಲಿಗಿ ಜಮಾತ್ ಸದಸ್ಯರು ಪ್ಲಾಸ್ಮಾ ದಾನ ಮಾಡಲು ಮುಂದಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ದೆಹಲಿಯ ಸುಲ್ತನ್ಪುರಿ ಮತ್ತು ನರೇಲಾ ಕ್ವಾರಂಟೈನ್ ಕೇಂದ್ರಗಳಲ್ಲಿದ್ದ ಕೊರೊನಾದಿಂದ ಗುಣಮುಖರಾದವರು ತಮ್ಮ ಪ್ಲಾಸ್ಮಾವನ್ನು ದಾನ ಮಾಡಲು ಮುಂದೆ ಬಂದಿದ್ದಾರೆ ಎಂದು ತಿಳಿಸಿದ್ದಾರೆ.
ಈಗಾಗಲೇ ಕೊರೊನಾ ಸೋಂಕಿನಿಂದ ಗುಣಮುಖರಾದ ಸುಮಾರು 25 ಮಂದಿ ತಬ್ಲಿಗಿಗಳು ಪ್ಲಾಸ್ಮಾ ದಾನ ಮಾಡಿದ್ದು ಆ ಪೈಕಿ ಸುಲ್ತನ್ಪುರಿ ಕ್ವಾರಂಟೈನ್ ಕೇಂದ್ರದಲ್ಲಿದ್ದ ತಮಿಳುನಾಡಿನ ವ್ಯಕ್ತಿಯೊಬ್ಬರು ಮಾತನಾಡಿ, ಮಾನವೀಯತೆ ನೆಲೆಯಲ್ಲಿ ಬೇರೆಯವರ ಜೀವ ಉಳಿಸಲು ಪ್ಲಾಸ್ಮಾ ದಾನ ಮಾಡಿದ್ದೇನೆ. ನನ್ನಂತೆ ಕೊರೊನಾದಿಂದ ಗುಣಮುಖರಾದ ಇತರರು ಪ್ಲಾಸ್ಮಾ ದಾನ ಮಾಡಲು ಮುಂದೆ ಬಂದಿದ್ದಾರೆ ಎಂದು ಹೇಳಿದ್ದಾರೆ.
ಸೋಂಕಿನಿಂದ ಚೇತರಿಸಿಕೊಂಡವರು ಪ್ಲಾಸ್ಮಾ ದಾನ ಮಾಡುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಹ ಇತ್ತೀಚೆಗೆ ಮನವಿ ಮಾಡಿದ್ದರು.
ದೆಹಲಿಯ ನಿಜಾಮುದ್ದೀನ್ನ ಮಸೀದಿಯಿಂದ 2,300 ಜನರನ್ನು ತೆರವುಗೊಳಿಸಲಾಗಿದ್ದು ಆ ಪೈಕಿ 1,080 ಜನರಿಗೆ ಸೋಂಕು ತಗುಲಿದೆ. ಹಲವು ಗುಣಮುಖರಾಗಿ ಆಸಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸೋಮವಾರ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ ನೀಡಿದ್ದಾರೆ.