ನವದೆಹಲಿ, ಎ.28 (Daijiworld News/MB) : ಕೊರೊನಾ ವೈರಸ್ ಸೋಂಕು ದೇಶದಲ್ಲಿ ಹೆಚ್ಚುತ್ತಲ್ಲೇ ಇದ್ದು ಇದೀಗ ಸುಪ್ರೀ ಕೋರ್ಟ್ನ ಉದ್ಯೋಗಿಯೊಬ್ಬರಲ್ಲೂ ಕೊರೊನಾ ಸೋಂಕು ದೃಢಪಟ್ಟಿದೆ.
ಸೋಮವಾರ ಸುಪ್ರೀಂ ಕೋರ್ಟ್ ಉದ್ಯೋಗಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದ್ದು ಅವರು ಏಪ್ರಿಲ್ 16ರಂದು ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸಿದ್ದರು ಎಂದು ತಿಳಿದು ಬಂದಿದೆ. ಇದಾದ ಎರಡು ದಿನಗಳ ಬಳಿಕ ಅವರಿಗೆ ಜ್ವರ ಬಂದಿದ್ದು ಪರೀಕ್ಷೆಯ ವರದಿ ಪಾಸಿಟಿವ್ ಬಂದಿದ್ದು ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ವ್ಯಕ್ತಿಯು ಇಬ್ಬರು ರಿಜಿಸ್ಟ್ರಾರ್ಗಳನ್ನು ಸಂಪರ್ಕಿಸಿದ್ದು ಪ್ರಸ್ತುತ ಅವರಿಬ್ಬರನ್ನು ಕ್ವಾರಂಟೈನ್ನಲ್ಲಿ ಇರುವಂತೆ ತಿಳಿಸಲಾಗಿದೆ. ಹಾಗೆಯೇ ಸಂಪರ್ಕಕ್ಕೆ ಬಂದ ಇತರ ವ್ಯಕ್ತಿಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ.
ಕೊರೊನಾ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಮಾರ್ಚ್ 23 ರಿಂದಲ್ಲೇ ಸುಪ್ರೀಂ ಕೋರ್ಟ್ ಕಾರ್ಯಕಲಾಪಗಳನ್ನು ಸ್ಥಗಿತಗೊಳಿಸಲಾಗಿದ್ದು ತುರ್ತು ಪ್ರಕರಣಗಳನ್ನು ಮಾತ್ರ ವಿಡಿಯೋ ಕಾನ್ಫೆರೆನ್ಸ್ ಮೂಲಕ ವಿಚಾರಣೆ ಮಾಡಲಾಗುತ್ತಿದೆ.