ಬಳ್ಳಾರಿ, ಎ.26 (DaijiworldNews/PY) : ಶ್ರೀಕಂಠೇಗೌಡರಂತಹ ರಾಜಕಾರಣಿಗಳು ಬೇರೆಯವರಿಗೆ ಮಾದರಿಯಾಗಬೇಕು. ಅದು ಬಿಟ್ಟು ಬೀದಿಗಿಳಿದು ಜಗಳ ಮಾಡಬಾರದು ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದರಾಯನಪುರ ಸೇರಿದಂತೆ ಅನೇಕ ಕಡೆ ಈ ರೀತಿಯಾದ ಘಟನೆಗಳು ನಡೆದಿದ್ದು, ಇಂತಹ ಘಟನೆಗಳು ಇನ್ನು ಮರುಕಳಿಸಬಾರದು ಎಂದು ತಿಳಿಸಿದರು.
ಕೊರೊನಾ ಸೋಂಕಿನಿಂದ ಬಳ್ಳಾರೆ ಸೇರದಂತೆ ಇತರ ಜಿಲ್ಲೆಗಳಲ್ಲಿ ಗುಣಮುಖರಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಎ.27 ಸೋಮವಾರದಿಂದ ಅಧಿಕೃತವಾಗಿ ಪ್ಲಾಸ್ಮಾ ಥೆರಪಿ ಪ್ರಾರಂಭವಾಗಲಿದ್ದು, ಮತ್ತಷ್ಟು ಸೋಂಕಿತರು ಬೇಗನೇ ಗುಣಮುಖರಾಗುತ್ತಾರೆ ಎಂದರು.
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಡೆಂಗ್ಯೂ, ಜ್ವರ, ಹೃದಯ ಸಮಸ್ಯೆ ಇರುವವರಿಗೆ ಪಾಸ್ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದೇನೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಈ ವಿಚಾರವಾಗಿ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದರು. ತಮ್ಮ ಪ್ರಾಣವನ್ನು ಲೆಕ್ಕಿಸದೇ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರ ರಕ್ಷಣೆ ಮಾಡುವುದು ನಮ್ಮ ಸರ್ಕಾರದ ಹೊಣೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಅವರಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೆ ನಂಜನಗೂಡಿನ ಜ್ಯುಬಿಲಿಯೆಂಟ್ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ಸೋಂಕು ಹೇಗೆ ತಗುಲಿತು ಎನ್ನುವುದು ಗೊತ್ತಾಗಿಲ್ಲ ಎಂದು ಹೇಳಿದರು.