ಬೆಂಗಳೂರು, ಎ.24(DaijiworldNews/PY) : ಬಡವರಿಗಾಗಿ ನೀಡುವ ಅಕ್ಕಿ ತಮಿಳುನಾಡು ಪಾಲಾಗುತ್ತಿದೆ. ಬಿಜೆಪಿ ಸಕ್ರಿಯ ನಾಯಕರೇ ಮಾರುತ್ತಿದ್ದಾರೆ. ಆಹಾರ ಕಾಯ್ದೆ ಪ್ರಕಾರ ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ತಡೆಗೆ ಬೆಂಬಲ ನೀಡುತ್ತೇವೆ. ಸರ್ಕಾರಗಳ ಪಾರದರ್ಶಕ ಎಲ್ಲಾ ಕಾರ್ಯಕ್ಕೆ ಸಹಕಾರವಿದೆ. ಅವರ ಇತಿಮಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅನುಷ್ಠಾನದ ಸಂದರ್ಭ ಭ್ರಷ್ಟಾಚಾರ ನಡೆಯುತ್ತಿದೆ. ಈ ವಿಚಾರ ಸಿಎಂ ಅವರಿಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ನಾವು ಸಿಎಂ ಅವರ ಗಮನಕ್ಕೆ ತರಬೇಕಾಗಿದೆ ಎಂದು ತಿಳಿಸಿದರು.
ರಾಜ್ಯದ ಬಡವರಿಗಾಗಿ ನೀಡುವ ಅಕ್ಕಿ ತಮಿಳುನಾಡಿನ ಪಾಲಾಗುತ್ತಿದೆ. ಅಕ್ರಮವಾಗಿ ಸುಮಾರು 1879 ಕ್ವಿಂಟಾಲ್ ಅಕ್ಕಿ ಮಾರಾಟವಾಗಿದೆ. ತಮಿಳುನಾಡು ಬಾರ್ಡರ್ಗೆ ಇದನ್ನು ಸಾಗಿಸಲಾಗಿದ್ದು, ಬಿಜೆಪಿ ಸಕ್ರಿಯ ನಾಯಕರೇ ವ್ಯಾಪಾರ ಮಾಡಿದ್ದಾರೆ ಎಂದರು.
ನಾವು ಹರಿಯಾಣದ ಅಕ್ಕಿಯನ್ನು ಸೀಜ್ ಮಾಡಿದ್ದೇವೆ. ಅಕ್ಕಿಯನ್ನು ಸರ್ಜಾಪುರದ ಗೋಡೌನ್ನಲ್ಲಿ ಸಂಗ್ರಹಿಸಿದ್ದಾರೆ. ಅಕ್ಕಿ ಸಂಗ್ರಹ ಮಾಡಬೇಕಾದರೆ ತಹಸೀಲ್ದಾರ್ರ ಅನುಮತಿ ಸಿಗಬೇಕು. ಯಾವುದೇ ಅನುಮತಿ ದೊರಕದೇ ಅಕ್ಕಿ ಸಂಗ್ರಹಿಸಿದ್ದಾರೆ. ತಹಸೀಲ್ದಾರ್ಗೆ ಈಗ ಧಮ್ಕಿ ಹಾಕಿದ್ದಾರೆ. ಬೆಜಿಪಿ ಮುಖಂಡ ಬುಲೆಟ್ ಬಾಬು ಎಂಬವರ ಗೋಡೌನ್ನಲ್ಲಿ ಅಕ್ಕಿ ಸಂಗ್ರಹವಾಗಿದ್ದು, ಇದನ್ನು ನಮ್ಮ ಕಾರ್ಯಕರ್ತರು ಪತ್ತೆ ಮಾಡಿದ್ದಾರೆ. ಇದು ಸರ್ಕಾರಸ ಸ್ವತ್ತಾದರೆ ಘೋಷಣೆ ಮಾಡಬೇಕು. ಇದರ ಬಗ್ಗೆ ಆಹಾರ ಕಾಯ್ದೆ ಪ್ರಕಾರ ಕಠಿಣ ಕ್ರಮಕೈಗೊಳ್ಳಬೇಕು. ಬಿಜೆಪಿ ಮುಖಂಡನನ್ನು ಬಂಧಿಸಬೇಕು ಎಂದು ಹೇಳಿದರು.
ಇದೇ ರೀತಿಯಾಗಿ ಪ್ರತಿಯೊಂದು ಜಿಲ್ಲೆಯಲ್ಲೂ ಅಕ್ರಮವಾಗಿ ವ್ಯಾಪಾರ ನಡೆಯುತ್ತಿದೆ. ಅಕ್ಕಿ ಪಾಲಿಶ್ ಮಾಡಿ ಬ್ಲಾಕ್ನಲ್ಲಿ ಮಾರಾಟ ಮಾಡುತ್ತಾರೆ. ಅಕ್ಕಿಯನ್ನು 30/40 ರೂ ನಂತೆ ಮಾರಾಟ ಮಾಡುತ್ತಾರೆ ಎಂದು ತಿಳಿಸಿದರು.