ಬೆಂಗಳೂರು, ಎ.24(DaijiworldNews/PY) : ರಾಮನಗರದ ಜನರು ಭಯ ಪಡಬೇಕಾದ ಅಗತ್ಯವಿಲ್ಲ. ಈಗಾಗಲೇ ಆ ಕೈದಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಅವರಿಂದ ಸೋಂಕು ವ್ಯಾಪಿಸದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಅವರು, ಪಾದರಾಯನಪುರ ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ರಾಮನಗರಕ್ಕೆ ಸ್ಥಳಾಂತರ ಮಾಡಿದ್ದ ವಿಷಯವಾಗಿ ತಪ್ಪು ನಡೆದಿಲ್ಲ. ಅಲ್ಲದೇ ಯಾರೂ ತಪ್ಪು ಮಾಡಿಲ್ಲ. ಸಂದರ್ಭಕ್ಕೆ ಅನುಸಾರವಾಗಿ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಬೆಂಗಳೂರಿನ ಹಜ್ ಭವನಕ್ಕೆ ಪಾದರಾಯನಪುರ ಆರೋಪಿಗಳನ್ನು ಸ್ಥಳಾಂತರ ಮಾಡುತ್ತೇವೆ. ಇದಕ್ಕೆ ಎಲ್ಲಾ ತಯಾರಿ ಆಗುತ್ತಿದೆ. ಜೈಲಿನ ಸಿಬ್ಬಂದಿಗೂ ಪರೀಕ್ಷೇ ನಡೆಸಿ ಕ್ವಾರಂಟೈನ್ಮಾಡುತ್ತೇವೆ. ಪೊಲೀಸರಿಗೆ ಇಲ್ಲೂ ತಪಾಸಣೆ ನಡೆಸಿ ಅಗತ್ಯವಿದ್ದರೆ ಕ್ವಾರಂಟೈನ್ ಮಾಡುತ್ತೇವೆ ಎಂದು ತಿಳಿಸಿದರು.
ಬಳಿಕ ಎಚ್ಡಿಕೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಲಹೆ ಯಾರು ಕೊಡುತ್ತಾರೋ ಅನ್ನುವುದು ಮುಖ್ಯವಲ್ಲ. ಆ ಸಂದರ್ಭ ಆರೋಪಿಗಳನ್ನು ಜೈಲಿನಲ್ಲಿ ಇಡುವುದು ಮುಖ್ಯವಾಗಿತ್ತು. ಆರೋಪಿಗಳನ್ನು ಜೈಲಿನಲ್ಲಿಡುವ ಬದಲು ಆಸ್ಪತ್ರೆಯಲ್ಲಿ ಇಡುತ್ತಿದ್ದರೆ ಆಪಾದನೆ ಬರುತ್ತಿತ್ತು, ಏನೇ ಮಾಡಲೂ ಹೋದರೂ ಟೀಕೆ ಬಂದೇ ಬರುತ್ತದೆ. ಸಮಯ, ಸಂದರ್ಭ ನೋಡಿಕೊಂಡು ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲದೇ, ರಾಮನಗರದ ಜೈಲಿನಲ್ಲಿ ಆರೋಪಿಗಳಿಗೆ ಸೋಂಕು ಕಂಡುಬಂದರೆ ಸ್ಥಳಾಂತರ ಮಾಡುತ್ತೇವೆ ಎಂದು ಮೊದಲೇ ನಾವು ತಿಳಿಸಿದ್ದೆವು, ಈ ವಿಚಾರವನ್ನು ಕುಮಾರಸ್ವಾಮಿ ಅವರಿಗೂ ತಿಳಿಸಿದ್ದೆವು ಎಂದರು.