ಬೆಂಗಳೂರು, ಎ.23 (DaijiworldNews/PY) : ಸೋನಿಯಾ ಗಾಂಧಿಯವರು ದೇಶದಲ್ಲಿ ಸಾಮರಸ್ಯ ಹಾಗೂ ಭ್ರಾತೃತ್ವ ಬೆಳೆಯಲು ಕೆಲಸಮಾಡಿದ್ದಾರೆ. ನಮ್ಮೆಲ್ಲರಂತೆ ಸೋನಿಯಾ ಗಾಂಧಿಯವರು ಭಾರತೀಯರು. ಅವರು ಅರ್ನಾಬ್ ಗೋಸ್ವಾಮಿ ಅವರಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ಭಾರತೀಯರು ಎಂದು ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಸೋನಿಯಾ ಗಾಂಧಿ ಅವರು ಪಾಲ್ವರ್ ಸಾಧುಗಳ ಹತ್ಯೆ ಪ್ರಕರಣ ಬಗ್ಗೆ ಯಾಕೆ ಮೌನ ವಹಿಸಿದ್ದಾರೆ. ಹೀಗೆಯೇ ಅಲ್ಪಸಂಖ್ಯಾತರಿಗೆ ಆಗುತ್ತಿದ್ದರೆ ಅವರು ಸುಮ್ಮನೆ ಕುಳಿತಿರುತ್ತಿದ್ದರೆ ಎಂದು ಸಾಧುಗಳು ಹಾಗೂ ಇತರರೊಂದಿಗೆ ರಿಪಬ್ಲಿಕ್ ಟಿವಿಯಲ್ಲಿ ಅರ್ನಾಬ್ ಗೋಸ್ವಾಮಿ ಅವರು ಚರ್ಚಿಸಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಪತ್ರಿಕೋದ್ಯಮವು ಗೌರವಾನ್ವಿತ ವೃತ್ತಿಯಾಗಿದ್ದು, ಪ್ರಜಾಪ್ರಭುತ್ವದ ಮೂರು ಸ್ತಂಭಗಳನ್ನು ಇದು ಮೌಲ್ಯಮಾಪನ ಮಾಡಲು ಜನರಿಗೆ ಅವಕಾಶ ನೀಡುತ್ತದೆ. ಆದರೆ, ಅರ್ನಾಬ್ ಗೋಸ್ವಾಮಿ ಅವರು ಪತ್ರಿಕೋದ್ಯಮ ವೃತ್ತಿಯನ್ನು ಹೇಗೆ ಮಾಡಬಾರದು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ. ಸೋನಿಯಾ ಗಾಂಧಿಯವರನ್ನು ಸಂಬಂಧವಿಲ್ಲದ ವಿಷಯದಲ್ಲಿ ಉಲ್ಲೇಖಿಸುವುದು ಮಾನಹಾನಿ ಮಾಡಿದಂತೆ, ಇದು ಅವರೊಳಗಿರುವ ಒಬ್ಬ ದ್ವೇಷಶಾಸ್ತ್ರಜ್ಞನನ್ನು ಬಹಿರಂಗಪಡಿಸುತ್ತದೆ ಎಂದು ಹೇಳಿದ್ದಾರೆ.