ನವದೆಹಲಿ, ಮಾ.30 (DaijiworldNews/PY) : ಎಪ್ರಿಲ್ ತಿಂಗಳ ನಡುವೆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ, ಸಶಸ್ತ್ರ ಪಡೆಗಳ ನಿಯೋಜನೆ ಮಾಡಲಾಗುವುದು ಎಂಬ ಸಾಮಾಜಿಕ ಮಾಧ್ಯಮಗಳಲ್ಲಿನ ಸಂದೇಶಗಳು ಸುಳ್ಳು ಎಂದಿರುವ ಭಾರತೀಯ ಸೇನೆ, ಕೊರೊನಾ ವೈರಸ್ ನಿಭಾಯಿಸಲು ರಾಷ್ಟ್ರೀಯ ಕೆಡೆಟ್ ಕೋರ್(ಎನ್ಸಿಸಿ) ಹಾಗೂ ಯೋಧರನ್ನು ನಾಗರಿಕ ಆಡಳಿತಕ್ಕೆ ಸಹಾಯ ಮಾಡಲು ನಿಯೋಜಿಸಲಾಗುವುದು. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸಂದೇಶಗಳು ಸಂಪೂಣ ಸುಳ್ಳು ಎಂದು ಭಾರತೀಯ ಸೇನೆ ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ.
ಈ ನಡುವೆ ರಾಷ್ಟ್ರವ್ಯಾಪ್ತಿ ಕರೆ ನೀಡಲಾಗಿರುವುದು 21 ದಿನಗಳ ಲಾಕ್ಡೌನ್ ಅವಧಿಯನ್ನು ಎ.14 ಬಳಿಕ ವಿಸ್ತರಿಸಲಾಗುವುದು ಎಂಬ ಮಾಧ್ಯಮದ ವರದಿಗಳನ್ನು ಕೇಂದ್ರ ಸರ್ಕಾರ ಸೋಮವಾರ ತಳ್ಳಿಹಾಕಿದೆ.
ಕೆಲವು ಮಾಧ್ಯಮಗಳ ವರದಿಗಳಲ್ಲಿನ ಊಹಾಪೋಹಾಗಳನ್ನು ತಿರಸ್ಕರಿಸಿರುವ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರು, ಇವೆಲ್ಲವೂ ನಿರಾಧಾರ ಎಂದು ತಿಳಿಸಿದ್ದಾರೆ.
ಸಂಪುಟ ಕಾರ್ಯದರ್ಶಿಯನ್ನು ಉಲ್ಲೇಖಿಸಿ ಸರ್ಕಾರಿ ಸ್ವಾಮ್ಯದ ಸುದ್ದಿ ಮಾಹಿತಿ ಬ್ಯೂರೋ ಕೂಡಾ ಈ ವರದಿಗಳನ್ನು ತಿರಸ್ಕರಿಸಿದ್ದು, ಟ್ವೀಟ್ ಮಾಡಿದೆ.
21 ದಿನಗಳ ಲಾಕ್ಡೌನ್ ಅವಧಿ ಮುಗಿದ ಬಳಿಕ ಪುನಃ ಅವಧಿಯನ್ನು ವಿಸ್ತರಿಸಲಾಗುವುದು ಎಂಬ ವದಂತಿಗಳು ಹರಡುತ್ತಿದ್ದು, ಇವು ಕೆಲ ಮಾಧ್ಯಮಗಳಲ್ಲೂ ವರದಿಯಾಗಿದೆ. ಆದರೆ, ಈ ವರದಿಗಳೆಲ್ಲವೂ ಆಧಾರರಹಿತವಾಗಿದೆ ಎಂದಿರುವ ಸಂಪುಟ ಕಾರ್ಯದರ್ಶಿಯವರು, ಈ ವರದಿಗಳನ್ನು ತಿರಸ್ಕರಿಸಿದ್ದಾರೆ ಎಂದು ಸೋಮವಾರ ಬೆಳಿಗ್ಗೆ ಪಿಐಬಿ ತಿಳಿಸಿದೆ.
ಪ್ರಧಾನಿ ಮೋದಿ ಅವರು ಮಾ.25 ರಿಂದ ಎ.14 ರವರೆಗೆ ವ್ಯಾಪಕವಾಗಿ ಹರಡುತ್ತಿರುವ ಕರೋನಾ ವೈರಸ್ ಸಾಂಕ್ರಾಮಿಕ ರೋಗ ತಡೆಗಟ್ಟುವ ಉದ್ದೇಶದಿಂದ ಇಡೀ ದೇಶವನ್ನು ಸಂಪೂರ್ಣ ಲಾಕ್ ಡೌನ್ ಮಾಡಲು ಘೋಷಿಸಿದ್ದಾರೆ. ಲಾಕ್ಡೌನ್ನ ಭಾಗವಾಗಿ ಅನಿವಾರ್ಯವಲ್ಲದ ಎಲ್ಲಾ ಸೇವೆಗಳನ್ನು ನಿರ್ಬಂಧಿಸಲಾಗಿದೆ.
ಈವರೆಗೆ, ಕೊರೊನಾ ಸೋಂಕು ಭಾರತೀಯ ಸೇನೆಯು ಮೂವರು ಸಿಬ್ಬಂದಿಯಲ್ಲಿ ದೃಢಪಟ್ಟಿದ್ದು, ಕೋಲ್ಕತ್ತಾದ ಕಮಾಂಡ್ ಆಸ್ಪತ್ರೆಯಲ್ಲಿ ಕರ್ನಲ್ ಹುದ್ದೆಯಲ್ಲಿರುವ ಒಬ್ಬ ವೈದ್ಯರು ಹಾಗೂ ಡೆಹ್ರಾಡೂನ್ನ ಸೇನಾ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರೊಬ್ಬರಲ್ಲಿ ಭಾನುವಾರ ಸೋಂಕು ದೃಢಪಟ್ಟಿದೆ.
ಕೊರೊನಾ ಸೋಂಕು ಈ ಹಿಂದೆ ಯೋಧನೊಬ್ಬನಿಗೆ ದೃಢಪಟ್ಟಿತ್ತು.