ತಿರುವನಂತಪುರ, ಮಾ.28 (DaijiworldNews/PY) : ಕರ್ನಾಟಕ ಪೊಲೀಸರು ರಾಜ್ಯಕ್ಕೆ ಅಗತ್ಯವಾದ ಸರಕು ಸಾಮಾಗ್ರಿಗಳನ್ನು ಸಾಗಿಸಲು ನೆರವಾಗುವ ಪ್ರಮುಖ ಹೆದ್ದಾರಿಯನ್ನು ನಿರ್ಬಂಧಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ದೂರು ಸಲ್ಲಿಸಿದ್ದು, ಕರ್ನಾಟಕದ ಈ ಕ್ರಮದ ಬಗ್ಗೆ ಶೀಘ್ರವೇ ಮಧ್ಯ ಪ್ರವೇಶಿಸುವಂತೆ ತಿಳಿಸಿದ್ದಾರೆ.
ಪೊಲೀಸರು ವಿರಾಜಪೇಟೆ ಮೂಲಕ ಹಾದುಹೋಗುವ ತಲಚೇರಿ-ಕೊಡಗು ರಾಜ್ಯ ಹೆದ್ದಾರಿ 30 ಗಡಿಯನ್ನು ಮುಚ್ಚಿದ್ದಾರೆ ಎಂದು ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರದಲ್ಲಿ ಕೇರಳ ಸಿಎಂ ಉಲ್ಲೇಖಿಸಿದ್ದಾರೆ. ಈ ಮಾರ್ಗವನ್ನು ನಿರ್ಬಂಧಿಸಿದರೆ, ರಾಜ್ಯವನ್ನು ಲಾರಿಗಳು ತಲುಪಲು ಕಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.
ಕೇರಳಕ್ಕೆ ಅಗತ್ಯವಾದ ವಸ್ತುಗಳ ಸರಬರಾಜಿಗೆ ಈ ಮಾರ್ಗ ಮುಖ್ಯವಾಗುತ್ತದೆ. ಈ ಮಾರ್ಗವನ್ನು ನಿರ್ಬಂಧಿಸಿದರೆ, ಅಗತ್ಯವಾದ ಸರಕುಗಳನ್ನು ಸಾಗಿಸುವ ವಾಹನಗಳು ನಮ್ಮ ರಾಜ್ಯವನ್ನು ತಲುಪಲು ಹೆಚ್ಚು ದೂರ ಕ್ರಮಿಸಬೇಕಾಗುತ್ತದೆ. ರಾಷ್ಟ್ರೀಯ ಲಾಕ್ಡೌನ್ನ ಸಂದರ್ಭದಲ್ಲಿ ಕೇರಳ ಜನರಿಗೆ ಇದು ಹೆಚ್ಚು ಕಷ್ಟವಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಲಾಕ್ಡೌನ್ನ ಈ ಪರಿಸ್ಥಿತಿಯಲ್ಲಿ ಅಗತ್ಯ ವಸ್ತುಗಳನ್ನು ಸಾಗಾಟ ಮಾಡುವುದಕ್ಕೆ ಅಡ್ಡಿ ಪಡಿಸುವ ಯಾವುದೇ ಕ್ರಮಗಳನ್ನು ಕೈಗೊಳ್ಳಬಾರದು ಎಂದು ನೀವು ಹೇಳಿದ್ದೀರಿ ಎಂದು ಬರೆದಿದ್ದರು, ಪತ್ರದ ಪ್ರತಿಯನ್ನು ಶನಿವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ.
ಕೊರೊನಾ ವೈರಸ್ ವಿರುದ್ದ ಕೇರಳ ರಾಜ್ಯ ಹೋರಾಟ ನಡೆಸಿದ್ದು, ಅಗತ್ಯ ಸರಕುಗಳನ್ನು ಸಾಗಾಟ ಮಾಡಿಕೊಳ್ಳುವ ಸಲುವಾಗಿ ಖಚಿತಪಡಿಸಿಕೊಳ್ಳಲು ಈ ವಿಚಾರವಾಗಿ ಶೀಘ್ರವಾಗಿ ಮಧ್ಯಪ್ರವೇಶಿಸುವಂತೆ ಕೇರಳ ಸಿಎಂ ಪ್ರಧಾನಿ ಮೋದಿ ಅವರಲ್ಲಿ ಕೋರಿದ್ದಾರೆ.