ಪಶ್ಚಿಮ ಬಂಗಾಳ, ಮಾ.26 (Daijiworld News/MSP) : ದೇಶದಲ್ಲಿ ಕೊರೊನಾ ಹರಡದಂತೆ ತಡೆಗಟ್ಟಲು 21 ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ. ಇದರಿಂದಾಗಿ ದಿನದ ಕೂಲಿಯನ್ನೇ ನಂಬಿ ಬದುಕುವ ಬಡ ಜನರು ಅನ್ನ, ಊಟಕ್ಕೆ ಪರದಾಡುತ್ತಿದ್ದಾರೆ. ಹಲವು ವಲಸೆ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಈ ಸಮಯದಲ್ಲಿ ಆಹಾರ ವಸತಿಗಳಲಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಇಂತಹ ಹಲವು ಜನರನ್ನು ಸುರಕ್ಷಿತವಾಗಿ ಸರ್ಕಾರಿ ಶಾಲೆಗಳಲ್ಲಿ ಆಶ್ರಯ ನೀಡಲಾಗಿದೆ. ಇವರ ಊಟಕ್ಕಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ.
ಸೌರವ್ ಗಂಗೂಲಿ ಅವರು ಈ ನಿರಾಶ್ರಿತರ ಸಹಾಯಕ್ಕಾಗಿ ಸುಮಾರು 50 ಲಕ್ಷ ರೂ. ಮೌಲ್ಯದ ಅಕ್ಕಿಯನ್ನು ವಿತರಿಸುತ್ತಿದ್ದಾರೆ. ಈ ಬಗ್ಗೆ ಬೆಂಗಾಲ್ ಕ್ರಿಕೆಟ್ ಅಸೋಸಿಯೇಶನ್ ಟ್ವೀಟ್ ಮಾಡಿ "ಗಂಗೂಲಿ ಅವರು ಮಾಡುತ್ತಿರುವ ಸಹಾಯ ಇನ್ನಷ್ಟು ಜನರಿಗೆ ಸ್ಪೂರ್ತಿಯಾಗಲಿ. ಜನರಿಗೆ ಸಹಾಯವಾಗಲಿ " ಎಂದಿದೆ.
ಸಿಎಬಿ ಅಧ್ಯಕ್ಷ ಅವಿಶೇಕ್ ದಾಲ್ಮಿಯಾ ಅವರು ಸರ್ಕಾರದ ತುರ್ತು ಪರಿಹಾರ ನಿಧಿಗೆ 5 ಲಕ್ಷ ರೂ. ದೇಣಿಗೆ ನೀಡಿ ಅಗತ್ಯವಿರುವ ಜನರಿಗೆ ಬೆಂಬಲ ನೀಡಿದ್ದಾರೆ.