ನವದೆಹಲಿ, ಮಾ.19 (DaijiworldNews/PY) : ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ಪವನ್ ಕುಮಾರ್ ಗುಪ್ತಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ಗುರುವಾರ ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಅರುಣ್ ಮಿಶ್ರಾ, ಆರ್.ಎಫ್. ನಾರಿಮನ್, ಆರ್. ಭಾನುಮತಿ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ಪೀಠವು ಅರ್ಜಿ ವಿಚಾರಣೆ ನಡೆಸಿದ್ದು, ಮೌಖಿಕ ವಿಚಾರಣೆ ಹಾಗು ಗಲ್ಲು ಶಿಕ್ಷೆ ಜಾರಿ ಆದೇಶಕ್ಕೆ ತಡೆ ನೀಡಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ ಎಂದು ತಿಳಿಸಿದೆ.
ಕಳೆದ ಜನವರಿಯಲ್ಲಿ ನ್ಯಾಯಮೂರ್ತಿಗಳಾದ ಆರ್. ಭಾನುಮತಿ, ಅಶೋಕ್ ಭೂಷಣ್ ಮತ್ತು ಎ.ಎಸ್.ಬೋಪಣ್ಣ ನೇತೃತ್ವದ ನ್ಯಾಯಪೀಠವು ಅಪರಾಧಿಯ ಅರ್ಜಿಯನ್ನು ವಜಾಗೊಳಿಸಿತ್ತು. ಮಾ.4ರಂದು ನಿರ್ಭಯಾ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿ ಪವನ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಯವರು ತಿರಸ್ಕರಿಸಿದ್ದರು. ನಂತರ ಅಪರಾಧಿಗಳು ಸುಪ್ರೀಂ ಕೋರ್ಟ್ನ ತೀರ್ಪನ್ನು ಪ್ರಶ್ನಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮೋರೆ ಹೋಗಿದ್ದು, ಆದರೆ ಅದು ಅರ್ಜಿಯನ್ನು ತಿರಸ್ಕರಿಸಿತ್ತು.
ಮಾ.5ರಂದು ಪ್ರಕರಣ ಸಂಬಂಧ ಪ್ರಕಟಗೊಂಡ ತೀರ್ಪಿನ ಪ್ರಕಾರ, ಮಾ.20 ಶುಕ್ರವಾರದಂದು ಬೆಳಿಗ್ಗೆ 5.30ಕ್ಕೆ ನಾಲ್ವರು ನಿರ್ಭಯಾ ಅಪರಾಧಿಗಳಾದ ಪವನ್ ಕುಮಾರ್ ಗುಪ್ತ, ಮುಖೇಶ್ ಕುಮಾರ್ ಸಿಂಗ್, ವಿನಯ್, ಅಕ್ಷಯ್ ಅವರನ್ನು ಗಲ್ಲಿಗೇರಿಸಲಾಗುತ್ತದೆ.