ನವದೆಹಲಿ, ಮಾ 19 ( Daijiworld News/MSP): ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಗುರುವಾರದಂದು ನೂತನ ರಾಜ್ಯಸಭೆಗೆ ನಾಮ ನಿರ್ದೇಶಿತ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಮಗೆ ನೀಡಿರುವ ಅಧಿಕಾರ ಬಳಸಿ ಗೊಗೊಯ್ ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡಿದ್ದರು. ರಂಜನ್ ಗೊಗೊಯ್ ಅವರಿಗೆ ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಪ್ರಮಾಣವಚನ ಬೋಧಿಸಿದರು. ನ್ಯಾಯಶಾಸ್ತ್ರಜ್ಞ ಕೆಟಿಎಸ್ ತುಳಸಿ ಅವರ ನಿವೃತ್ತಿಯ ಬಳಿಕ ತೆರವಾಗಿದ್ದ ಸ್ಥಾನಕ್ಕೆ ಗೊಗೊಯ್ ನೇಮಕವಾಗಿದ್ದಾರೆ.
ವಿಶೇಷ ಎಂದರೆ ರಂಜನ್ ಗೊಗೊಯ್ ಅವರ ಮೂಲಕ ದೇಶದ ಇತಿಹಾಸದಲ್ಲೇ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರು ರಾಜ್ಯಸಭೆ ಪ್ರವೇಶಿಸಿದಂತಾಗಿದೆ. ಆದರೆ ಇದಕ್ಕೆ ನ್ಯಾಯಾಂಗ ಕ್ಷೇತ್ರದಿಂದ ತೀವ್ರ ವಿರೋಧ ಕೇಳಿ ಬಂದಿದೆ. ಗೊಗೊಯ್ ನಡೆಗೆ ಹಲವು ನಿವೃತ್ತ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ ಗೊಗೊಯ್ ಪ್ರಮಾಣವಚನ ಸ್ವೀಕರಿಸುವ ವೇಳೆ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು 'ಶೇಮ್ ಶೇಮ್' ಎಂದು ಕೂಗಿ ವಿರೋಧ ವ್ಯಕ್ತಪಡಿಸಿದ್ದಾರೆ. ನ್ಯಾಯಾಂಗದ ಮೇಲೆ ಪ್ರಭಾವ ಬೀರಲು ಸರ್ಕಾರ ಪ್ರಯತ್ನಿಸುತ್ತಿದ್ದು, ನಿವೃತ್ತ ನ್ಯಾಯಮೂರ್ತಿಯ ರಾಜ್ಯಸಭೆ ಪ್ರವೇಶದಿಂದ ಸಾಬೀತಾಗಿದೆ ಎಂದು ಕಿಡಿಕಾರಿದೆ.
65 ವರ್ಷದ ರಂಜನ್ ಗೊಗೊಯ್ ಅವರು 13 ತಿಂಗಳ ಅಧಿಕಾರಾವಧಿಯ ಬಳಿಕ ಕಳೆದ ವರ್ಷದ ನವೆಂಬರ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾದರು. ಇವರು ಶಬರಿಮಲೆಗೆ ಮಹಿಳೆಯರ ಪ್ರವೇಶ ಅಯೋಧ್ಯೆ ಭೂವಿವಾದ ಮುಂತಾದ ಪ್ರಕರಣದ ಕುರಿತು ಐತಿಹಾಸಿಕ ತೀರ್ಪು ನೀಡಿದ್ದರು.
ಪ್ರತಿಪಕ್ಷ ಹಾಗೂ ನ್ಯಾಯಾಂಗ ಕ್ಷೇತ್ರದ ವಿರೋಧಗಳಿಗೆ ಪ್ರತಿಕ್ರಿಯೆ ನೀಡಿರುವ ರಂಜನ್ ಗೊಗೊಯ್ "ದೇಶದ ಒಳಿತಿಗಾಗಿ ನ್ಯಾಯಾಂಗ ಹಾಗೂ ಶಾಸಕಾಂಗ ಕೆಲವೊಮ್ಮೆ ಜೊತೆಯಾಗಿ ಕೆಲಸ ಮಾಡಬೇಕಾಗುತ್ತದೆ" ಎಂದಿದ್ದಾರೆ.