ನವದೆಹಲಿ, ಮಾ.19 (Daijiworld News/MB) : ವಿಶ್ವದಾದ್ಯಂತ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ಗೆ ಈವರೆಗೆ ಯಾವುದೇ ಔಷಧಿಯಿಲ್ಲ. ಆದರೆ ಕೊರೊನಾ ನಿವಾರಿಸಲು ಪತಂಜಲಿ ಸಂಸ್ಥೆಯ ಬಳಿ ಔಷಧಿ ಇದೆ ಎಂದು ಮಾತನಾಡಿ ಖ್ಯಾತ ಯೋಗ ಗುರು ಬಾಬಾ ರಾಮ್ದೇವ್ ವೈದ್ಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕಳೆದ ಹಲವು ತಿಂಗಳಿನಿಂದ ವಿಶ್ವದಾದ್ಯಂತ ಭೀತಿಗೆ ಕಾರಣವಾಗಿರುವ ಕೊರೊನಾ ವೈರಸ್ಗೆ ಔಷಧಿ ಕಂಡು ಹಿಡಿಯಲು ವಿಜ್ಞಾನಿಗಳು ಮುಂದಾಗಿದ್ದು ಈ ನಡುವೆ ಯೋಗ ಗುರು ಬಾಬಾ ರಾಮದೇವ್ ಅವರು ಕೊರೊನಾ ರೋಗಕ್ಕೆ ಆಯುರ್ವೇದದಲ್ಲಿ ಮದ್ದಿದೆ ಎಂದು ಹೇಳಿ ಭಾರೀ ಚರ್ಚೆಗೆ ಕಾರಣವಾಗಿದ್ದಾರೆ.
ಪತಂಜಲಿ ಸಂಸ್ಥೆಯ ಅಶ್ವಗಂಧ ಉತ್ಪನ್ನದ ಜಾಹಿರಾತಿನಲ್ಲಿ ಮಾತನಾಡಿರುವ ಅವರು ಕೊರೊನಾ ವೈರಸ್ ಸೇರಿದಂತೆ ವಿವಿಧ ಮಾರಣಾಂತಿಕ ವೈರಸ್ಗಳಿಗೆ ಆಯುರ್ವೇದದಲ್ಲಿ ಔಷಧವಿದೆ ಎಂದು ಹೇಳಿದ್ದಾರೆ. ಅಷ್ಟು ಮಾತ್ರವಲ್ಲದೇ ಕೊರೊನಾ ಸೋಂಕಿಗೆ ಅಶ್ವಗಂಧ ಮದ್ದು ಎಂಬುದು ವೈಜ್ಞಾನಿಕ ಸಂಶೋಧನೆಯಲ್ಲಿ ಸಾಬೀತಾಗಿದೆ. ಅಶ್ವಗಂಧ ಮಾನವನ ಪ್ರೋಟಿನ್ ಜೊತೆ ಕೊರೊನಾ ಪ್ರೋಟಿನ್ ಸಮ್ಮಿಲನಗೊಳ್ಳದಂತೆ ನೋಡಿಕೊಳ್ಳುತ್ತದೆ ಎಂದು ಹೇಳಿದ್ದರು.
ಹಾಗೆಯೇ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಯೋಗ ಮಾಡಿ ಎಂದು ಸಲಹೆ ನೀಡಿ #YogaForCorona ಎಂದು ಹ್ಯಾಷ್ಟ್ಯಾಗ್ ಹಾಕಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ವೈದ್ಯರು ಆಕ್ರೋಶಗೊಂಡಿದ್ದು ಇಂಥಹ ಹೇಳಿಕೆಗಳು ಜನರಲ್ಲಿ ನಕಲಿ ಭದ್ರತಾ ಭಾವನೆ ಸೃಷ್ಟಿ ಮಾಡುತ್ತದೆ. ಶಿಕ್ಷಿತರಲ್ಲದ ಜನರು ಈ ರೀತಿಯ ಜಾಹೀರಾತುಗಳನ್ನು ನೋಡಿ ನಂಬುತ್ತಾರೆ. ಇದು ಉತ್ತಮ ಬೆಳವಣೆಗೆಯಲ್ಲ. ಈ ರೀತಿಯ ಜಾಹೀರಾತುಗಳನ್ನು ಸರ್ಕಾರ ನಿಷೇಧ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಆಯುಶ್ ಇಲಾಖೆಯ ಸಲಹೆಗಾರ ಮನೋಜ್ ನೇಸರಿ ಅವರು, ಪತಂಜಲಿ ಸಂಸ್ಥೆಯ ಉತ್ಪನ್ನಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ. ಆದರೆ ಕೊರೊನಾ ಸೋಂಕಿಗೆ ಅದು ಮದ್ದು ಎಂಬ ಬಗ್ಗೆ ನನಗೂ ತಿಳಿದಿಲ್ಲ. ಈ ಕುರಿತಾಗಿ ಯಾರದರೂ ದೂರು ನೀಡಿದ್ದಲ್ಲಿ ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 170ಕ್ಕೆ ಏರಿದ್ದು, ಕರ್ನಾಟಕದಲ್ಲಿ 15 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.