ಮಹಾರಾಷ್ಟ್ರ, ಮಾ. 12 (Daijiworld News/MB) : ವಿಶ್ವಾದಾದ್ಯಂತ ಜನರನ್ನು ಬಲಿ ತೆಗೆದುಕೊಳ್ಳುತ್ತಿರುವ ಕೊರೊನಾ ವೈರಸ್ಗೆ ಈವರೆಗೂ ಚುಚ್ಚುಮದ್ದು ಕಂಡು ಹಿಡಿದಿಲ್ಲ. ಆದರೆ ಈ ಸೋಂಕಿಗೆ ಚುಚ್ಚು ಮದ್ದು ಇರುವುದಾಗಿ ಹೇಳಿ ಜನರಿಗೆ ವಂಚನೆ ಮಾಡುತ್ತಿದ್ದ ಆರೋಪದ ಮೇಲೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ರಾಧಾ ರಾಮನಾಥ ಸಾಮ್ಸೆ, ಸೀಮಾ ಕೃಷ್ಣ ಅಂಡಾಳೆ, ಸಂಗೀತ ರಾಜೇಂದ್ರ ಅವ್ಹಾದ್.
ಆರೋಪಿಗಳು ವೈದ್ಯರು ಮತ್ತು ಆರೋಗ್ಯ ಕ್ಷೇತ್ರದ ಕಾರ್ಯಕರ್ತರು ಎಂದು ಸುಳ್ಳು ಹೇಳಿ ಜನರನ್ನು ವಂಚಿಸುತ್ತಿದ್ದರು. ಹಾಗೆಯೇ ಕೊರೊನಾ ವೈರಸ್ ತಡೆಗೆ ಚುಚ್ಚುಮದ್ದು ತಮ್ಮ ಬಳಿ ಇದೆ ಹೇಳಿ ಜನರಿಗೆ ಮೋಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯರು ಇವರನ್ನು ಗಮನಿಸಿ ಸ್ಥಳೀಯ ವೈದ್ಯಾಧಿಕಾರಿ ಡಾ.ಮಹದೇವ ಮುಂಡೆ ಎಂಬುವವರ ಬಳಿ ದೂರು ನೀಡಿದರು. ಆ ಕೂಡಲೆ ಅಧಿಕಾರಿಗಳು ದಾಳಿ ನಡೆಸಿ ನಕಲಿ ಚುಚ್ಚುಮದ್ದು, ಬಾಟಲಿಗಳು ಹಾಗೂ ರಾಜ್ಯ ಸರ್ಕಾರ ನೀಡಿದ್ದ ಕೆಲ ಔಷಧಗಳನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ.