ನವದೆಹಲಿ, ಮಾ.12 (DaijiworldNews/PY) : ದೆಹಲಿ ಹಿಂಸಾಚಾರ ಹಿನ್ನೆಲೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಸ್ಥಳೀಯ ವ್ಯಕ್ತಿ ಹಾಗೂ ಮುಖ್ಯ ಪೇದೆಯೊಬ್ಬರ ಕೊಲೆ ಪ್ರಕರಣ ಸಂಬಂಧ 11 ಮಂದಿಯನ್ನು ಬಂಧಿಸಿದ್ಧಾರೆ.
ಗೋಕುಲ್ ಪುರಿಯಲ್ಲಿ ಫೆ.24ರಂದು ಸಿಎಎ ವಿರುದ್ದ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭ ಅಪರಿಚಿತರು ಮುಖ್ಯಪೇದೆ ರತನ್ ಲಾಲ್ ಎಂಬುವರನ್ನು ಗುಂಡಿಟ್ಟು ಕೊಲೆ ಮಾಡಿದ್ದರು.
ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ತನಿಖೆ ನಡೆಸಿದ ದೆಹಲಿ ಪೊಲೀಸರು ಹಲವು ಸಾಕ್ಷಿಗಳಿಂದ 7 ಮಂದಿ ಆರೋಪಿಗಳನ್ನು ಬಂಧಿಸಿದ್ಧಾರೆ. ಸಿಎಎ ವಿರುದ್ದ ಪ್ರತಿಭಟನೆ ನಡೆದ ದಿನದಂದೇ ಆರೋಪಿಗಳು ಸಂಚು ನಡೆಸಿ ಮುಖ್ಯಪೇದೆ ರತನ್ ಲಾಲ್ ಅವರನ್ನು ಕೊಲೆ ಮಾಡಿರುವುದಾಗಿ ಪೊಲೀಸರು ಹೇಳಿದ್ಧಾರೆ.
ದೆಹಲಿ ಹಿಂಸಾಚಾರ ಸಂದರ್ಭ ಕೊಲೆಯಾಗಿದ್ದ ಅಕ್ಬರಿ ಬೇಗಮ್ ಪ್ರಕರಣದ ಸಂಬಂಧ 4 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ಬರಿ ಬೇಗಂ ಅವರ ಶವ ಹಿಂಸಾಚಾರದ ಸಂದರ್ಭ ದೆಹಲಿಯ ಚರಂಡಿಯಲ್ಲಿ ದೊರೆತಿತ್ತು. ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭ ಹಲವಾರು ಮಂದಿ ಮೃತಪಟ್ಟಿದ್ಧಾರೆ.
ಚರಂಡಿಯಲ್ಲಿ 4 ಮಂದಿಯ ಶವಗಳು ದೊರೆತಿದ್ದವು. ಆ ನಾಲ್ಕು ಶವಗಳಲ್ಲಿ ಅಕ್ಬರಿ ಬೇಗಂ ಅವರ ಶವ ಕೂಡಾ ಒಂದು. ಅಕ್ಬರಿ ಅವರ ಕೊಲೆ ಮಾಡಿದ್ದ ಆರೋಪಿಗಳು ಚರಂಡಿಯಲ್ಲಿ ಶವವನ್ನು ಹೂತು ಹಾಕಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ಧಾರೆ.