ಬೆಂಗಳೂರು, ಮಾ. 06 (Daijiworld News/MB) : ರಾಜ್ಯದಲ್ಲಿ 2017ರಲ್ಲಿ 2,160 ಹಾಗೂ 2018 ರಲ್ಲಿ 2,405 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಖಂಡ ಕರ್ನಾಟಕ ರೈತ ಸಂಘ ಹೈಕೋರ್ಟ್ಗೆ ಗುರುವಾರ ಮಾಹಿತಿ ಸಲ್ಲಿಸಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ರೈತರಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 2016ನೇ ಸಾಲಿನ ಬೆಳೆ ನಷ್ಟ ಪರಿಹಾರ ಮೊತ್ತ ಬಿಡುಗಡೆಗೆ ಆದೇಶ ನೀಡುವಂತೆ ಯಾದಗಿರಿ ಜಿಲ್ಲಾ ಘಟಕದ ಸಂಚಾಲಕ ಮಲ್ಲನಗೌಡ್ ಪರಿವಾನ್ ಸಲ್ಲಿಸಿದ್ದ ಪಿಐಎಲ್ ಅನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯಪೀಠ ವಿಚಾರಣೆ ಮಾಡಿತು.
ಈ ಸಂದರ್ಭ ಅರ್ಜಿದಾರರ ಪರ ವಕೀಲ ಕ್ಲಿಫ್ಟನ್ ಡಿ.ರೊಜಾರಿಯೊ, ರೈತರ ಆತ್ಮಹತ್ಯೆ ಕುರಿತ ಅಂಕಿ ಅಂಶದ ಮೆಮೊ ಪ್ರತಿ ಸಲ್ಲಿಸಿ, 2017ರಲ್ಲಿ115 ಮಹಿಳೆಯರೂ ಸೇರಿದಂತೆ 2,160 ಹಾಗೂ 2018ರಲ್ಲಿ173 ಮಹಿಳೆಯರು ಸೇರಿದಂತೆ 2,405 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ನ್ಯಾಯಾಪೀಠ ಅದನ್ನು ದಾಖಲಿಸಿಕೊಂಡು ವಿಚಾರಣೆಯನ್ನು ಮಾ.30ಕ್ಕೆ ಮುಂದೂಡಿದ್ದು ಅರ್ಜಿದಾರರು ಸಲ್ಲಿಸಿದ ಅಂಕಿ ಅಂಶದ ಕುರಿತು ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ನ್ಯಾಯಾಲಯ ಅವಕಾಶ ನೀಡಿರುವದಾಗಿ ನಿರ್ದೇಶಿಸಿತು.
ಅರ್ಜಿಯಲ್ಲಿ ಬೆಳೆ ನಷ್ಟದ ಸಂದರ್ಭದಲ್ಲಿ ರೈತರಿಗೆ ಪರಿಹಾರ ಕಲ್ಪಿಸಲು ಹಾಗೂ ಆರ್ಥಿಕ ಬೆಂಬಲ ಒದಗಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಿ ರೈತರ ಮೂಲಭೂತ ಹಕ್ಕುಗಳನ್ನು ಕಾಪಾಡಬೇಕು. ಆತ್ಮಹತ್ಯೆಗೆ ಶರಣಾದ ರೈತರಿಗೆ ಪರಿಹಾರ ವಿತರಿಸಲು ಕ್ರಮ ಜರುಗಿಸಬೇಕು. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕು ರೈತರಿಗೆ 2016ನೇ ಸಾಲಿನ ಬೆಳೆ ನಷ್ಟ ಪರಿಹಾರದ ಹಣ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಲಾಗಿದೆ.