ಮುಂಬೈ, ಮಾ.06 (DaijiworldNews/PY) : ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೋರ್ವರು ವಿದ್ಯಾರ್ಥಿನಿಗೆ ಸರಿಯಾದ ಸಮಯಕ್ಕೆ ಪರೀಕ್ಷೆಗೆ ಹಾಜರಾಗಲು ಸಹಾಯ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಎಸ್ಎಸ್ಸಿ ಬೋರ್ಡ್ ಪರೀಕ್ಷೆಗೆ ತೆರಳಲು ವಿದ್ಯಾರ್ಥಿನಿ ಖಾರ್ ಆಟೋ ನಿಲ್ದಾಣದಲ್ಲಿ ಸರತಿಯಲ್ಲಿ ನಿಂತಿದ್ದಳು. ಈ ಸಂದರ್ಭ ವಿದ್ಯಾರ್ಥಿಯ ಆತಂಕವನ್ನು ಕಂಡ ಟ್ರಾಫಿಕ್ ಪೊಲೀಸ್ ಪೇದೆ, ಪರೀಕ್ಷೆ ಇದೆಯೇ ಎಂದು ವಿದ್ಯಾರ್ಥಿನಿಯನ್ನು ಕೇಳಿದ್ದು, ಆಕೆಗೆ ಎಸ್ಎಸ್ಸಿ ಬೋರ್ಡ್ ಪರೀಕ್ಷೆ ಇರುವುದು ತಿಳಿದಿದೆ. ಈ ವೇಳೆ ವಿದ್ಯಾರ್ಥಿನಿಯನ್ನು ಸರತಿಯಿಂದ ಹೊರಗೆ ಬರುವಂತೆ ಸೂಚಿಸಿದ್ದು, ಬಳಿಕ ಹೋಗುತ್ತಿದ್ದ ಆಟೋ ರಿಕ್ಷಾವನ್ನು ನಿಲ್ಲಿಸಿ ವಿದ್ಯಾರ್ಥಿನಿಯನ್ನು ಹತ್ತಿಸಿದ್ದಾರೆ. ಈ ಮುಖಾಂತರ ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರ ತಲುಪಲು ಸಹಾಯ ಮಾಡಿದ್ದಾರೆ. ಅಲ್ಲದೇ, ಗುಡ್ ಲಕ್ ಎಂದು ವಿಶ್ ಮಾಡಿ ಕಳುಹಿಸಿದ್ದಾರೆ.
ಮಿಸ್ಟರ್ ರ್ಯಾಟಿ ಎಂಬ ಟ್ವಿಟ್ಟರ್ ಬಳಕೆದಾರರು ಈ ಘಟನೆಗೆ ಸಾಕ್ಷಿಯಾಗಿದ್ದಾರೆ. ಅಲ್ಲದೇ ಖಾತೆಯಲ್ಲಿ ಈ ಕುರಿತಾಗಿ ಹಂಚಿಕೊಂಡಿದ್ಧಾರೆ. ಖಾರ್ ಆಟೋ ಸ್ಟೇಷನ್ ಬಳಿ ಪರೀಕ್ಷೆಗೆ ತೆರಳಲು ವಿದ್ಯಾರ್ಥಿನಿ ಆಟೋ ಸ್ಟೇಷನ್ ಬಳಿ ಸಾಲಿನಲ್ಲಿ ನಿಂತಿದ್ದಳು. ಈ ಸಂದರ್ಭ ಟ್ರಾಫಿಕ್ ಪೊಲೀಸ್ ಪೇದೆಯೊಬ್ಬರು ಆಕೆಯ ಬಳಿ ಪರೀಕ್ಷೆ ಇದೆಯೇ ಎಂದು ಕೇಳಿ, ಬಳಿಕ ಸರತಿ ಸಾಲಿನಿಂದ ಹೊರಬರಲು ಹೇಳಿ, ಆಟೋದಲ್ಲಿ ಆಕೆಯನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಅಲ್ಲದೇ ಗುಡ್ ಲಕ್ ಎಂದು ಹಾರೈಸಿದ್ದಾರೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಮುಂಬೈ ಪೊಲೀಸ್ ಇಲಾಖೆ ಸಹ ಈ ಘಟನೆಯ ಕುರಿತು ಟ್ವೀಟ್ ಮಾಡಿದ್ದು, ಎಸ್ಎಸ್ಸಿ ಪರೀಕ್ಷೆಯ ಮೊದಲ ದಿನ ಹಲವು ಸವಾಲುಗಳಿರುತ್ತವೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿನಿಗೆ ಸಹಾಯ ಮಾಡಲು ಸಾಧ್ಯವಾಗಿದ್ದಕ್ಕೆ ಸಂತೋಷವಾಗುತ್ತಿದೆ. ಇಂದಿನಿಂದ ಎಸ್ಎಸ್ಸಿ ಪರೀಕ್ಷೆ ಪ್ರಾರಂಭವಾಗುತ್ತಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್ ಎಂದು ಪೊಲೀಸ್ ಇಲಾಖೆ ಶುಭ ಹಾರೈಸಿದೆ.
ಪೊಲೀಸ್ ಪೇದೆಯ ಈ ಕೆಲಸಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಇಂತಹ ಕೆಲಸಗಳನ್ನು ಮುಂಬೈ ಪೊಲೀಸರಿಂದ ನಿರೀಕ್ಷಿಸಲು ಸಾಧ್ಯ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು ಇಂತಹ ಅಪರೂಪದ ಘಟನೆಗೆ ಪಾತ್ರರಾದ ಮುಂಬೈ ಪೊಲೀಸರಿಗೆ ಧನ್ಯವಾದ. ಅಗತ್ಯವಿರುವಾಗ ಯಾವಾಗಲೂ ಈ ರೀತಿಯ ಸಹಾಯ ಮಾಡಿ ಎಂದು ಪ್ರತಿಕ್ರಿಯೆ ನೀಡಿದ್ಧಾರೆ.