ನವದೆಹಲಿ, ಮಾ 6 (Daijiworld News/MSP): ಅಯೋಧ್ಯೆಯ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಕೆಲವು ತಿಂಗಳ ಬಳಿಕ ಇದೇ ತೀರ್ಪಿನ ಕುರಿತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಎಂಬ ಇಸ್ಲಾಮಿಕ್ ಸಂಘಟನೆ ಶುಕ್ರವಾರ ಸುಪ್ರೀಂ ಕೋರ್ಟ್ ನಲ್ಲಿ ಕ್ಯುರೇಟಿವ್ ಅರ್ಜಿ ಸಲ್ಲಿಸಿದೆ.
ಅಯೋಧ್ಯೆ ಭೂ ವಿವಾದ ವಿವಾದದ ಪ್ರಕರಣದಲ್ಲಿ ಪಿಎಫ್ಐ ಇಸ್ಲಾಮಿಕ್ ಸಂಘಟನೆ ಮುಖ್ಯ ಕಕ್ಷಿದಾರನಲ್ಲದಿದ್ದರೂ ಕೂಡ ಕಳೆದ ವರ್ಷ ನವೆಂಬರ್ 9ರಂದು ಸುಪ್ರೀಂ ಕೋರ್ಟ್ ನ ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ ನೀಡಿದ ತೀರ್ಪು, ತಮ್ಮ ಹಕ್ಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಕ್ಯುರೇಟಿವ್ ಅರ್ಜಿಯಲ್ಲಿ ಆಕ್ಷೇಪ ಸಲ್ಲಿದೆ. ಪಿಎಫ್ಐ ಅಯೋಧ್ಯೆ ತೀರ್ಪಿಗೆ ಸಂಬಂಧಪಟ್ಟಂತೆ ಕ್ಯುರೇಟಿವ್ ಅರ್ಜಿ ಸಲ್ಲಿಸಿದ ಎರಡನೇ ಸಂಘಟನೆಯಾಗಿದ್ದು ಮೊದಲನೆಯದಾಗಿ ಉತ್ತರ ಪ್ರದೇಶದ ಪೀಸ್ ಪಾರ್ಟಿ ಕೂಡಾ ಅರ್ಜಿಯನ್ನು ಸಲ್ಲಿದೆ.
ಮಾತ್ರವಲ್ಲದೇ ಈಗಾಗಲೇ ನೀಡಲಾಗಿರುವ ಅಯೋಧ್ಯೆ ಭೂ ವಿವಾದ ಕೇಸಿಗೆ ಸಂಬಂಧಪಟ್ಟಂತೆ ನೀಡಿರುವ ತೀರ್ಪಿಗೆ ತಡೆ ತರಬೇಕು ಜೊತೆಗೆ ಇದನ್ನು ಮುಕ್ತ ಕೋರ್ಟ್ ನಲ್ಲಿ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದೆ.