ನವದೆಹಲಿ, ಫೆ.23 (DaijiworldNews/PY) : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆ.24 ಸೋಮವಾರದಂದು ಭಾರತಕ್ಕೆ ಆಗಮಿಸಲಿರುವ ಹಿನ್ನೆಲೆ ಹಲವೆಡೆ ಬಿಗಿ ಭದ್ರತೆ ಕೈಗಳ್ಳಲಾಗಿದ್ದು, ಟ್ರಂಪ್ ಭೇಟಿ ನೀಡಲಿರುವ ಪ್ರಮುಖ ಸ್ಥಳಗಳಲ್ಲಿ ಒಂದಾದ ಆಗ್ರಾದಲ್ಲಿ ಲಂಗೂರ್ (ಉದ್ದನೆಯ ಬಾಲದ ಮಂಗಗಳು) ಗಳನ್ನು ಕೂಡ ನಿಯೋಜಿಸಲಾಗಿದೆ.
ಆಗ್ರಾದಲ್ಲಿ ಕೋತಿಗಳ ಕಾಟ ಹೆಚ್ಚಾಗಿದ್ದು, ಇದು ರಕ್ಷಣಾ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ. ಎಷ್ಟೇ ಭದ್ರತಾ ವ್ಯವಸ್ಥೆ ಮಾಡಿದರೂ ಕೋತಿಗಳನ್ನು ನಿಯಂತ್ರಿಸುವು ಕಷ್ಟವಾಗಿದೆ. ಅಲ್ಲದೇ, ಕಾನೂನಿನ ಪ್ರಕಾರ ಪ್ರಾಣಿಗಳ ಮೇಲೆ ಹಲ್ಲೆ ಮಾಡುವುದು ಕೂಡಾ ಅಪರಾಧ. ಹಾಗಾಗಿ ಕೋತಿಗಳನ್ನು ನಿಯಂತ್ರಿಸುವ ಸಲುವಾಗಿ ರಕ್ಷಣಾ ದಳವು ಐದು ಲಂಗೂರ್ಗಳನ್ನು ನಿಯೋಜಿಸಿದೆ.
ಲಂಗೋರ್ಗಳಿಗೆ ಸಾಮಾನ್ಯ ಪ್ರಭೇದದ ಮಂಗಗಳು ಹೆದರುತ್ತವೆ. ಸಾಮಾನ್ಯ ಕೋತಿಗಳಿಗಿಂತ ಲಂಗೂರ್ಗಳು ಗಾತ್ರದಲ್ಲಿ ದೊಡ್ಡವು. ಅಲ್ಲದೇ ಲಂಗೂರ್ಗಳು ಅತೀ ಆಕ್ರಮಣಶೀಲವಾಗಿರುತ್ತದೆ. ಕೋತಿಗಳು ಲಂಗೋರ್ಗಳನ್ನು ಕಂಡರೆ ಹತ್ತಿರ ಹೋಗುವುದಿಲ್ಲ. ಈ ಕಾರಣಕ್ಕಾಗಿ ಭದ್ರತಾ ಪಡೆಗಳು ಈ ಯೊಜನೆಯನ್ನು ರೂಪಿಸಿದೆ.