ಅಮೃತಸರ, ಫೆ 09 (Daijiworld News/MB) : ಈಗ ಟಿಕ್ಟಾಕ್ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವುದೆಂದರೆ ಯುವಜನರಿಗೆ ಬಲು ಇಷ್ಟ. ಇತ್ತೀಚಿಗೆ ಗೋಲ್ಡನ್ ಟೆಂಪಲ್ ಆವರಣದಲ್ಲಿ ಮಾಡಲಾದ ಟಿಕ್ಟಾಕ್ ವಿಡಿಯೋ ವೈರಲ್ ಆದ ಹಿನ್ನಲೆಯಲ್ಲಿ ಸಿಖ್ಖರ ಪವಿತ್ರ ಗೋಲ್ಡನ್ ಟೆಂಪಲ್ ಆವರಣದಲ್ಲಿ ಟಿಕ್ ಟಾಕ್ ವಿಡಿಯೋಗಳನ್ನು ಮಾಡುವುದನ್ನು ನಿಷೇಧಿಸಿ ಶಿರೋಮಣಿ ಗುರುದ್ವಾರ ಪರ್ಬಂದಕ್ ಸಮಿತಿ ಈ ಆದೇಶ ಹೊರಡಿಸಿದೆ.
ಪವಿತ್ರ ಸ್ಥಳದ ಬಳಿ ಯಾರು ಕೂಡ ಟಿಕ್ ಟಾಕ್ ವಿಡಿಯೋ ಮಾಡುವಂತಿಲ್ಲ ಎಂದು ನೊಟೀಸ್ ಅಂಟಿಸಲಾಗಿದೆ. ಹಾಗೆಯೇ ಯಾರದರೂ ಟಿಕ್ಟಾಕ್ ಮಾಡಿದಲ್ಲಿ ಅವರನ್ನು ತಡೆಯಲು ಕಾರ್ಯಕರ್ತರನ್ನು ಕೂಡಾ ನೇಮಕ ಮಾಡಲಾಗಿದೆ.
ಈ ಕುರಿತು ಮಾತನಾಡಿದ ಸಮಿತಿಯ ಸಿಬ್ಬಂದಿ, "ಈ ಪವಿತ್ರ ಸ್ಥಳದ ಮಹತ್ವ ತಿಳಿಯದವರು ಇಲ್ಲಿ ಬಂದು ಟಿಕ್ ಟಾಕ್ ವಿಡಿಯೋಗಳನ್ನು ಮಾಡುತ್ತಾರೆ. ಆ ಹಿನ್ನಲೆಯಲ್ಲಿ ನಾವು ಅವರನ್ನು ತಡೆಯುತ್ತೇವೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ರೋಮ್ಯಾಂಟಿಕ್ ಮತ್ತು ಮಾದಕ ಹಾಡುಗಳಿಗೆ ಗುರುದ್ವಾರದ ಬಳಿ ಟಿಕ್ ಟಾಕ್ ಮಾಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.