ಚಿಕ್ಕಬಳ್ಳಾಪುರ, ಜ.30 (Daijiworld News/PY) : "ಹೇಳಿದವರ ಮಾತು ಕೇಳೋಕೆ ನಾನೇನು ಎಳೆ ಮಗುನಾ. ನಾನು ಮೂರು ಬಾರಿ ಗೆದ್ದು ಶಾಸಕನಾದವನು. ವೈದ್ಯನಾಗಿದ್ದೇನೆ. ಪ್ರಪಂಚವನ್ನು ನೋಡಿದ್ದೇನೆ" ಎಂದು ಶಾಸಕ ಸುಧಾಕರ್ ಹೇಳಿದ್ಧಾರೆ.
ವಿಶ್ವನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸುಧಾಕರ್ ಅವರು, "ವಿಶ್ವನಾಥ್ ಅವರಿಗೆ ಒಳ್ಳೆಯದಾಗಲಿ ಎಂದು ಬಯಸುವವರಲ್ಲಿ ನಾನೂ ಒಬ್ಬ. ಮಾಧ್ಯಮಗಳ ಎದುರು ಬಹಿರಂಗವಾಗಿ ಮಾತನಾಡುವುದರಿಂದ ಏನೂ ಪ್ರಯೋಜನವಿಲ್ಲ. ಸೂಕ್ತವಾದ ವೇದಿಕೆಯಲ್ಲಿ ಯಾರಿಗೆ ಯಾವ ರೀತಿ ಹೇಳಬೇಕೋ ಹಾಗೆ ಹೇಳೋಣ ಅಂತ ತಿಳಿಸಿದ್ದೆ. ನಾನು ವಿಶ್ವನಾಥ್ ಅವರ ಹಿತದೃಷ್ಟಿಯಿಂದಲೇ ಹೇಳಿದ್ದೇನೆ" ಎಂದರು.
"ವಿಶ್ವನಾಥ್ ಅವರ ನೋವು ನನಗೆ ಅರ್ಥವಾಗುತ್ತದೆ. ಅವರ ನೋವಿನ ಜೊತೆ ನಾನಿದ್ದೇನೆ. ನಾನು ವಿಶ್ವನಾಥ್ರವರ ಜೊತೆಯಾಗಿ ನನ್ನ ಆತ್ಮೀಯ ಸ್ನೇಹಿತರಾದ ಎಂಟಿಬಿ ಜೊತೆ ಶಾಶ್ವತವಾಗಿ ಇರುತ್ತೇನೆ. ಸ್ನೇಹ ಹಾಗೂ ವಿಶ್ವಾಸಕ್ಕೆ ಅವರಿಬ್ಬರ ಜೊತೆ ಜೀವನಪರ್ಯಂತ ಇರುತ್ತೇನೆ. ವಿಶ್ವನಾಥ್ ಅವರ ಬಗ್ಗೆ ನನಗೆ ಗೌರವವಿದೆ" ಎಂದು ಹೇಳಿದರು.
ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಅವರು, "ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ಆಗಿ ಮಂತ್ರಿ ಸ್ಥಾನ ಸಿಕ್ಕರೆ ಒಳ್ಳೆಯದಾಗುತ್ತದೆ. ನನಗೆ ಯಾವ ಖಾತೆ ಸಿಕ್ಕರೂ ಕೆಲಸ ಮಾಡುತ್ತೇನೆ. ರಾಜ್ಯಕ್ಕೆ ಉತ್ತಮ ಕೆಲಸ ಮಾಡಿ, ಸಿಎಂ ಬಿಎಸ್ವೈ ಅವರ ಕೈ ಬಲಪಡಿಸುತ್ತೇನೆ" ಎಂದು ತಿಳಿಸಿದರು.