ನವದೆಹಲಿ, ಜ 15 (Daijiworld News/ MB) :ದೇಶದ ರಾಜಧಾನಿ ದೆಹಲಿ ಅಥವಾ ಗುಜರಾತಿನಲ್ಲಿ ಜನವರಿ 26ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಇಸಿಸ್ ಉಗ್ರರನ್ನು ಬಳಸಿ ರಕ್ತಪಾತ ನಡೆಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಸಂಚು ರೂಪಿಸಿದೆ ಎಂದು ಮಾಹಿತಿ ದೊರೆತಿರುವುದಾಗಿ ವರದಿಯಾಗಿದೆ.
ಕೆಲ ದಿನಗಳಗಳ ಕಾಲ ಬೆಂಗಳೂರಿನಲ್ಲೂ ನೆಲೆಸಿದ್ದ ಪ್ರಸ್ತುತ ದೆಹಲಿ ಪೊಲೀಸರ ವಶದಲ್ಲಿರುವ ಖ್ವಾಜಾ ಮೊಯಿದ್ದೀನ್ ಸೇರಿ ಆರು ಮಂದಿಯ ತಂಡದಲ್ಲಿದ್ದ ಇಬ್ಬರು ಈ ದಾಳಿ ಮಾಡುವ ಸಾಧ್ಯತೆ ಇರುವುದಾಗಿ ಮಾಹಿತಿ ದೊರೆತಿದ್ದು ಪೊಲೀಸ್ ಈ ಇಬ್ಬರೂ ಉಗ್ರರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಪಾಕಿಸ್ತಾನದ ಐಎಸ್ಐ, ಇಸಿಸ್ ಉಗ್ರರಿಂದ ದಾಳಿಯನ್ನು ನಡೆಸಿ ಆ ದಾಳಿಯ ಹೊಣೆಯನ್ನು ಇಸಿಸ್ಗೆ ಹೊರೆಸುವ ಸಂಚು ಮಾಡಲಾಗಿದೆ ಎಂದು ವದರಿಯಾಗಿದೆ.
ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯ ಹಿಂದೂ ಸಂಘಟನೆಯ ನಾಯಕ ಕೆ.ಪಿ.ಸುರೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಆರು ಮಂದಿ ಉಗ್ರರು ತಮಿಳುನಾಡಿನಿಂದ ಪರಾರಿಯಾಗಿದ್ದು ಈ ಪೈಕಿ ಖ್ವಾಜಾ ಮೊಯಿದ್ದೀನ್, ಅಬ್ದುಲ್ ಸಮದ್ ಸೇರಿ ಮೂವರನ್ನು ದೆಹಲಿಯಲ್ಲಿ ಹಾಗೂ ನಾಲ್ಕನೆಯವನನ್ನು ಗುಜರಾತಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧನ ಮಾಡಿದ್ದರು. ಈ ಉಗ್ರರು ಹತ್ಯೆ ಮಾಡಿದ ನಂತರ ಬೆಂಗಳೂರಿನಲ್ಲಿ ನೆಲೆ ನಿಂತು, ಬಳಿಕ ಪಶ್ಚಿಮ ಬಂಗಾಳಕ್ಕೆ ತೆರಳಿ ಅಲ್ಲಿಂದ ನೇಪಾಳಕ್ಕೆ ಹೋಗಿ ಮತ್ತೆ ಭಾರತಕ್ಕೆ ಬಂದಿತ್ತು.
ಈ ಉಗ್ರರ ಗುಂಪಲ್ಲಿದ್ದ ಇನ್ನಿಬ್ಬರು ನಾಪತ್ತೆಯಾಗಿದ್ದು, ಅವರು ಜ.26ರಂದು ದೆಹಲಿ ಅಥವಾ ಗುಜರಾತ್ ರಾಜ್ಯದಲ್ಲಿ ದಾಳಿ ನಡೆಸುವ ಸಾಧ್ಯತೆಗಳಿವೆ. ಆ ದಾಳಿಯನ್ನು ಇಬ್ಬರು ಜೊತೆಯಾಗಿ ಮಾಡಬಹುದು ಅಥವಾ ಬೇರೆ ಬೇರೆಯಾಗಿ ಮಾಡಬಹುದು, ಈ ಇಬ್ಬರು ಉಗ್ರರಿಗೆ ವಿದೇಶ ನಿಯಂತ್ರಕರೊಬ್ಬರಿಂದ ಸಹಾಯ ದೊರೆಯುತ್ತಿದೆ ಎಂದು ಹೇಳಲಾಗುತ್ತಿದೆ.
ತಮಿಳು ಭಾಷೆಯಲ್ಲಿ ಮಾತನಾಡುತ್ತಿರುವ ನಾಲ್ಕನೇ ಆರೋಪಿ ಜ.26ಕ್ಕೆ ಮುನ್ನ ಬೃಹತ್ ದಾಳಿ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾನೆ ಎಂದು ವರದಿಯಿಂದ ತಿಳಿದು ಬಂದಿದೆ.