ನವದೆಹಲಿ, ಜ 6 (Daijiworld News/MB) : ದೆಹಲಿ ರ್ಯಾಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನನ್ನನ್ನು ನಿಂದಿಸಿದ್ದು ಬಿಟ್ಟರೆ, ದೇಶದ ಅಭಿವೃದ್ಧಿ ಕುರಿತು ಯಾವ ಮಾತನ್ನು ಆಡಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೇಳಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಅವರು, "ಅಮಿತ್ ಶಾ ಅವರು ಜನರನ್ನು ತಪ್ಪು ದಾರಿಗೆ ಎಳೆಯಲು ಸಾರ್ವಜನಿಕ ಆಸ್ತಿಯನ್ನು ಪೋಲು ಮಾಡುತ್ತಿದ್ದು ರ್ಯಾಲಿಯಲ್ಲಿ ನನ್ನನ್ನು ನಿಂದಿಸಿದ್ದು ಬಿಟ್ಟರೆ ಬೇರೆ ಏನನ್ನೂ ಮಾತನಾಡಿಲ್ಲ. ದೆಹಲಿ ಅಭಿವೃದ್ಧಿ ಬಗ್ಗೆ ಮಾನಾಡಲೇ ಇಲ್ಲ ಎಂದು ದೂರಿದ್ದಾರೆ.
ದೆಹಲಿಗೆ ಯಾವುದಾದರೂ ಸಲಹೆ ನೀಡಲಿದ್ದರೆ ಅವರು ನನಗೆ ತಿಳಿಸಲಿ, ನಾವು ನಮ್ಮ ಅಧಿಕಾರವಧಿಯಲ್ಲಿ ಚಾಲನೆಗೆ ತರುತ್ತೇವೆ ಎಂದು ತಿಳಿಸಿದ್ದಾರೆ.
ಅಮಿತ್ ಶಾ ಅವರ ಭಾಷಣದಿಂದ ಬಿಜೆಪಿ ಚುನಾವಣಾ ರ್ಯಾಲಿ ನಡೆಸುತ್ತಿದೆ ಎಂದು ತಿಳಿದು ಬರುತ್ತದೆ. ಅವರಿಗೆ ದೆಹಲಿಯ ಮೇಲೆ ಯಾವ ಕಾಳಜಿಯೂ ಇಲ್ಲ. ಅಮಿತ್ ಶಾ ಅವರು ಪ್ರಚಾರ ಕಾರ್ಯ ಮಾಡಲು ಸಮರ್ಥ ನಾಯಕ ಎಂಬುದು ಇದರಿಂದ ತಿಳಿದು ಬರುತ್ತದೆ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ವಕ್ತಾರೆ ಆತಿಶಿ ಹೇಳಿದ್ದಾರೆ.