ಕೇರಳ, ಡಿ 28 (Daijiworld News/MSP): ಕೇರಳದ ಸುಮಾರು ನೂರಕ್ಕೂ ಹೆಚ್ಚಿನ ಸ್ಥಳದಲ್ಲಿ ಡಿ 29 ರಂದು ರಾತ್ರಿ 11 ಗಂಟೆಗೆ ಮಹಿಳೆಯರು ಬೀದಿಗಿಳಿಯಲಿದ್ದು, ನೈಟ್ ವಾಕ್ ಮಾಡಲಿದ್ದಾರೆ.
ದೇಶದಾದ್ಯಂತ ಹೆಚ್ಚುತ್ತಿರುವ ಅತ್ಯಾಚಾರ ಹಾಗೂ ಮಹಿಳೆಯ ಮೇಲಿನ ದೌರ್ಜನ್ಯ ಖಂಡಿಸಿ, ಸಾರ್ವಜನಿಕ ಸ್ಥಳಗಳನ್ನು ಮಹಿಳೆಯರೂ ಮುಕ್ತವಾಗಿ ಓಡಾಡಬಹುದೆಂಬ ಉದ್ದೇಶದಿಂದ ಕೇರಳ ರಾಜ್ಯ ಸರ್ಕಾರವೂ ಮಹಿಳೆಯರ ಸಬಲೀಕರಣಕ್ಕಾಗಿ ಈ ಹೊಸ ಕಾರ್ಯಕ್ರಮವನ್ನು ಘೋಷಿಸಿದೆ. ಕೇರಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೂ 'ಸಾಧೈರ್ಯಂ ಮುನ್ನೊಟ್ಟು' (ಧೈರ್ಯದಿಂದ ಮುಂದುವರಿಯಿರಿ) ಎಂಬ ಘೋಷಣೆಯೊಂದಿಗೆ ‘ಮಹಿಳೆಯರಿಗಾಗಿ ನೈಟ್ ವಾಕ್’ ಆಯೋಜಿಸಿದೆ.
ಈ ನಡಿಗೆ ಡಿ.29 ರಂದು ರಾತ್ರಿ 11 ಗಂಟೆಗೆ ಪ್ರಾರಂಭವಾಗಿ ಮತ್ತು ಡಿ.30 ರ ಬೆಳಿಗ್ಗೆ 2 ಗಂಟೆಯವರೆಗೆ ಮುಂದುವರಿಯುತ್ತದೆ. ಮಹಿಳೆಯರು ರಾತ್ರಿ ನಡಿಗೆಯಲ್ಲಿ ಏಕಾಂಗಿಯಾಗಿ ಅಥವಾ ಎರಡು ಅಥವಾ ಮೂರು ಗುಂಪುಗಳಲ್ಲಿ ಭಾಗವಹಿಸಬಹುದು. ಇದಕ್ಕಾಗಿ ಈಗಾಗಲೇ ನೂರಕ್ಕೂ ಹೆಚ್ಚು ಸ್ಥಳವನ್ನು ಗುರುತಿಸಲಾಗಿದೆ. ಲಿಂಗ ತಾರತಮ್ಯವನ್ನು ಲೆಕ್ಕಿಸದೆ ಸಾರ್ವಜನಿಕ ಸ್ಥಳಗಳೂ ಪುರುಷರಿಗೆ ಮಾತ್ರ ಸೀಮಿತವಲ್ಲ ಎಂಬ ಸಂದೇಶದೊಂದಿಗೆ ಮಹಿಳೆಯರಿಗೆ ಹೆಚ್ಚಾಗಿ ಪ್ರವೇಶಿಸಲಾಗದ ಸಾರ್ವಜನಿಕ ಸ್ಥಳಗಳನ್ನು ಮರುಪಡೆದುಕೊಳ್ಳುವುದು ಇದರ ಪ್ರಮುಖ ಆಲೋಚನೆಯಾಗಿದೆ. ಭಾಗವಹಿಸುವವರಿಗೆ ಸಹಾಯ ಮಾಡಲು ಪ್ರದೇಶಗಳಲ್ಲಿ ಸ್ವಯಂಸೇವಕರನ್ನು ನಿಯೋಜಿಸಲಾಗುವುದು.
ರಾತ್ರಿಯಲ್ಲಿ ಮಹಿಳೆಯರು ಮನೆಯಿಂದ ಹೊರಹೋಗದಂತೆ ಇರುವ ಭಯವನ್ನು ಹೋಗಲಾಡಿಸಲು ಮಹಿಳೆಯರಿಗೆ ಸಹಾಯ ಮಾಡುವುದು ಈ ನಡಿಗೆಯಾಗಿದೆ ಉದ್ದೇಶವಾಗಿದೆ ಎಂದು ಸಚಿವ ಕೆ.ಕೆ.ಶೈಲಜಾ ಹೇಳಿದ್ದಾರೆ. ಡಿ.29 ರಂದು ನಡೆದ ಮೊದಲ ನಡಿಗೆಯ ನಂತರ, ಹಲವಾರು ಸ್ವಯಂಸೇವಕರು ಕಿರುಕುಳ ನೀಡುವವರನ್ನು ಗುರುತಿಸಲು ಮತ್ತು ಪೊಲೀಸರಿಗೆ ಮಾಹಿತಿ ನೀಡಲು ರಾಜ್ಯದ ವಿವಿಧ ಭಾಗಗಳಲ್ಲಿ ರಾತ್ರಿ ನಡಿಗೆ ನಡೆಸಲಿದ್ದಾರೆ. "ಕೆಲವರು ಓಂಟಿಯಾಗಿ ದಾರಿಹೋಕ ಮಹಿಳೆಯರಿಗೆ ಕಿರುಕುಳ ನೀಡುತ್ತಾರೆ. ಹೀಗಾಗಿ ಅಂತಹವರ ವಿರುದ್ದ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವ ಗುರಿಯನ್ನು ಕೇರಳ ಸರ್ಕಾರ ಹೊಂದಿದೆ ”ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.