ಬೆಂಗಳೂರು, ಡಿ 4 (Daijiworld News/MSP): ಅತ್ಯಾಚಾರ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ಎಲ್ಲಿರಬಹುದು ? ಹೀಗೊಂದು ಕುತೂಹಲ ಎಲ್ಲರನ್ನು ಕಾಡುತ್ತಿದ್ದರೆ ಅತ್ತ ಕಡೆ ಪೊಲೀಸರು ಆತನಿಗಾಗಿ ತಲೆಕೆಡಿಸಿಕೊಂಡು ಹುಡುಕುತ್ತಿದ್ದಾರೆ. ದೇಶ ಬಿಟ್ಟು ಪಲಾಯನ ಮಾಡಿರುವ ನಿತ್ಯಾನಂದ ಆಗಾಗ ವಿಡಿಯೊದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಆದರೆ ಆತ ಎಲ್ಲಿದ್ದಾನೆ ಎಂಬ ಪ್ರಶ್ನೆಗೆ ಉತ್ತರ " ಕೈಲಾಸ ದೇಶ".
ಪಾಸ್ಪೋರ್ಟ್
ರಿಷಭ ಧ್ವಜ
ಚಿತ್ರಗಳು: (ಕೈಲಾಸ.ಆರ್ಗ್ನ ಸ್ಕ್ರೀನ್ಶಾಟ್ಗಳು)
ಹೌದು ನಿತ್ಯಾನಂದ ಕೈಲಾಸವಾಸಿಯಾಗಿದ್ದಾನಂತೆ.. ಅಚ್ಚರಿಯದ್ರೂ ಆತನ ಪ್ರಕಾರ ಇದು ನಿಜ. ನಿತ್ಯಾನಂದ ಕೈಲಾಸ ಎಂಬ ಹೊಸ “ದೇಶ” ವನ್ನು ಸ್ಥಾಪಿಸಿದ್ದಾರೆ. "ಕೈಲಾಸ " ಎನ್ನುವುದು ಗಡಿರೇಖೆಯಿಲ್ಲದ ರಾಷ್ಟ್ರವಾಗಿದ್ದು, ತಮ್ಮ ದೇಶದಲ್ಲಿ ಹಿಂದೂ ಸಂಸ್ಕೃತಿಯನ್ನು ಪಾಲನೆ ಮಾಡಲಿರುವ ಹಕ್ಕನ್ನು ಕಳೆದುಕೊಂಡು, ದೇಶದಿಂದ ಉಚ್ಛಾಟಿತರಾಗಿರುವ ಜಗತ್ತಿನ ಎಲ್ಲ ಹಿಂದೂಗಳಿಗಿರುವ ರಾಷ್ಟ್ರವಾಗಿದೆ ಇದು ಎಂದು ಕೈಲಾಸದ ಬಗ್ಗೆ ಇರುವ ವೆಬ್ಸೈಟ್ ನಲ್ಲಿ ಮಾಹಿತಿ ನೀಡಲಾಗಿದೆ. ಅಂದಹಾಗೆ ಈ ವೆಬ್ ಸೈಟ್ ಇದೇ ವರ್ಷದ ಏಪ್ರಿಲ್ ನಿಂದ ಕಾರ್ಯಾರಂಭಿಸುತ್ತಿದೆ.
ಈ ವೆಬ್ ಸೈಟ್ ನಲ್ಲಿ ನಿತ್ಯಾನಂದ ಬಗ್ಗೆ ಹೊಗಳಿ ಹಾಗೂ ಕೈಲಾಸ ದೇಶದ ಬಗ್ಗೆ ಸವಿರಗಳಿದ್ದು ಆದಾಗ್ಯೂ, ಕೈಲಾಸ ಎಂಬ ದೇಶ ಎಲ್ಲಿದೆ ಎಂದು ಮಾಹಿತಿ ನೀಡಿಲ್ಲ. ಕೆಲವು ವರದಿಗಳ ಪ್ರಕಾರ ನಿತ್ಯಾನಂದ ಈಕ್ವೆಡಾರ್ನಲ್ಲಿ ಹೊಸ ದ್ವೀಪ ಖರೀದಿಸಿದ್ದು, ಅದಕ್ಕೆ ರಾಷ್ಟ್ರೀಯ ಮಾನ್ಯತೆ ನೀಡಲು ವಿಶ್ವಸಂಸ್ಥೆಗೆ ಮನವಿ ಸಲ್ಲಿಸಲು ಪ್ರಯತ್ನಿಸುತ್ತಿದ್ದಾರಂತೆ.!
ಈ ವೆಬ್ಸೈಟ್ನಲ್ಲಿ ನೀಡಿರುವ ಮಾಹಿತಿ ನೋಡಿದರೆ ಕೈಲಾಸ ಎಂಬ ’ಹೊಸ ದೇಶ’ ಇದೆಯೇ ಅಥವಾ ಕಪೋಲಕಲ್ಪಿತವೋ ಎಂಬುದು ಸ್ಪಷ್ಟವಾಗುವುದಿಲ್ಲ.
ಕೈಲಾಸ ವೆಬ್ಸೈಟ್ನ ಪ್ರಕಾರ, ಯುಎಸ್ಎ ನಲ್ಲಿ ಹಿಂದೂ ಆದಿ ಶೈವ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ನೇತೃತ್ವದಲ್ಲಿ ಆರಂಭಿಸಿದ ಆಂದೋಲನವಿದು. ಜನಾಂಗ, ಧರ್ಮ, ಲಿಂಗ , ಪಂಥ ತಾರತಮ್ಯವಿಲ್ಲದೆ ಕಿರುಕುಳವಿಲ್ಲದೇ, ಹಿಂಸಾಚಾರಗಳಿಲ್ಲದೇ, ಆಧ್ಯಾತ್ಮಿಕ, ಕಲೆ ಮತ್ತು ಸಂಸ್ಕೃತಿಯನ್ನು ಪಾಲನೆ ಮಾಡಲು ಇರುವ ಸ್ವರ್ಗದಂತಹ ಜಾಗ ಇದಾಗಿದೆ.
ಕೈಲಾಸದ ದೇಶದ ಭಾಷೆಯೂ ಇಂಗ್ಲೀಷ್, ಸಂಸ್ಕೃತ, ಮತ್ತು ತಮಿಳು ಆಗಿದ್ದು ಆರೋಗ್ಯ, ಶಿಕ್ಷಣ, ಊಟ ಉಚಿತವಾಗಿದೆ. ದೇವಾಲಯ ಆಧಾರಿತ ಜೀವನಶೈಲಿ ಯ ಪುನರುಜ್ಜೀವನಕ್ಕಾಗಿ ಈ ದೇಶ ಸ್ಥಾಪಿತವಾಗಿದೆ. ಕೈಲಾಸ ದೇಶ ತನ್ನದೇ ಆದ ರಾಷ್ಟ್ರದ್ವಜ ಹೊಂದಿದ್ದು, ಇದರಲ್ಲಿ ನಿತ್ಯಾನಂದ ಮತ್ತು ಶಿವನ ವಾಹನ ನಂದಿಯ ಚಿತ್ರವಿದ್ದು ರಿಷಭ ಧ್ವಜ ಎಂದು ಇದನ್ನು ಕರೆಯಲಾಗಿದೆ. ಶಿಕ್ಷಣ, ಖಜಾನೆ, ವಿತ್ತ ಹೀಗೆ ಹಲವಾರು ಸರ್ಕಾರಿ ಇಲಾಖೆಗಳು ಕೈಲಾಸದಲ್ಲಿವೆ.ಪ್ರಬುದ್ಧ ನಾಗರಿಕತೆಯ ಇಲಾಖೆ ಎಂಬ ಇಲಾಖೆಯೊಂದಿದ್ದು ಇದು ಸನಾತನ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಇಲಾಖೆಯಾಗಿದೆಯಂತೆ. ಇಲ್ಲಿ ಗ್ಲೋಬಲ್ ಡಿಜಿಟಲ್ ಲೈಬ್ರರಿಯುಳ್ಳ ನಿತ್ಯಾನಂದ ಎಂಬ ಹೆಸರಿನ ವಿಶ್ವವಿದ್ಯಾಲಯವಿದೆಯಂತೆ
ಇನ್ನು ಈ ದೇಶದ ಪಾಸ್ಪೋರ್ಟ್ ಇದ್ದು, ಕೈಲಾಸದ ಪ್ರಜೆಯಾಗಲು ಯಾರಾದರೂ ಅರ್ಜಿ ಸಲ್ಲಿಸಬಹುದಾಗಿದೆ. ಕೈಲಾಸದ ಪಾಸ್ ಪೋರ್ಟ್ ಹೊಂದಿದವರು, ಹನ್ನೊಂದು ಆಯಾಮಗಳಲ್ಲಿ ಮತ್ತು ಕೈಲಾಸ ಸೇರಿದಂತೆ ಹದಿನಾಲ್ಕು ಲೋಕಗಳಲ್ಲಿ ಉಚಿತ ಪ್ರವೇಶವಿದೆ.
ಸನಾತನ ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸಲು ಮತ್ತು ವಿಶ್ವದ ಶ್ರೇಷ್ಠ ಹಿಂದೂ ರಾಷ್ಟ್ರವನ್ನು ನಿರ್ಮಿಸಲು ದೇಣಿಗೆ ನೀಡಬಹುದಾಗಿದ್ದು, ಕ್ರಿಪ್ಟೋಕರೆನ್ಸಿ ಇಲ್ಲಿ ಸ್ವೀಕರಿಸಲಾಗುತ್ತದೆ.