ನವದೆಹಲಿ, ಅ 13 (Daijiworld News/MSP): ವಿಶ್ವದಲ್ಲೇ ಬೇರೆ ದೇಶಗಳಿಗಿಂತ ಭಾರತದಲ್ಲಿರುವ ಮುಸ್ಲಿಮರು ಹೆಚ್ಚು ಸಂತಸದ ಜೀವನ ನಡೆಸುತ್ತಿದ್ದಾರೆ. ಇಂತಹ ಹಿಂದೂ ಸಂಸ್ಕೃತಿಗೆ ಧನ್ಯವಾದಗಳು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಅವರು ಶನಿವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಹಿಂದೂ" ಒಂದು ಧರ್ಮ ಅಥವಾ ಭಾಷೆಯಲ್ಲ,“ಹಿಂದೂ” ಎಂಬುದು ಭಾರತದಲ್ಲಿ ವಾಸಿಸುವ ಎಲ್ಲರ ಸಾಂಸ್ಕೃತಿಕ ಪರಂಪರೆಯಾಗಿದೆ. ನಮ್ಮ ಧರ್ಮವು ವೈವಿಧ್ಯತೆಯನ್ನು ಸ್ವೀಕರಿಸುವ ಮತ್ತು ಗೌರವಿಸುವ ವಿಶ್ವದ ಏಕೈಕ ಸಂಸ್ಕೃತಿಯಾಗಿದೆ. ಇದು ವಿಶ್ವದ ಏಕೈಕ ಸಂಸ್ಕೃತಿಯಾಗಿದೆ. ಭಾರತವು ಎಲ್ಲಾ ಧರ್ಮಗಳಿಗೆ ಆಶ್ರಯ ನೀಡಿರುವ ದೇಶವಾಗಿದೆ ಎಂದರು.
“ಯಹೂದಿಗಳು ಅಲೆದಾಡುತ್ತಿದ್ದಾಗ, ಅವರಿಗೆ ಆಶ್ರಯ ನೀಡಿದ ಏಕೈಕ ರಾಷ್ಟ್ರ ಭಾರತ. ಪಾರ್ಸಿಗಳು ತಮ್ಮ ಧರ್ಮವನ್ನು ಭಾರತದಲ್ಲಿ ಮಾತ್ರ ಮುಕ್ತವಾಗಿ ಆಚರಿಸುತ್ತಾರೆ. ಭಾರತದಲ್ಲಿ ಮಾತ್ರ ಸಂತೋಷ ಜೀವನ ನಡೆಸುವ ಮುಸ್ಲಿಮರು ಕಂಡುಬರುತ್ತಾರೆ. ಯಾಕೆ ಗೊತ್ತಾ ? ಯಾಕೆಂದರೆ ನಾವು ಹಿಂದೂಗಳು” ಎಂದರು.
ಭಾರತ ಹಿಂದೂ ರಾಷ್ಟ್ರ. ಕೆಲವು ಭಾರತೀಯರು ತಾವು ಹಿಂದೂ ಎಂದು ಹೇಳಿಕೊಳ್ಳಲು ನಾಚಿಕೆಪಡುತ್ತಾರೆ. ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಅನೇಕ ಜನರೂ ಇದ್ದಾರೆ. ಇನ್ನು ಕೆಲವರು ತಮ್ಮ ಆಸಕ್ತಿಗಳಿಗೆ ಅಡ್ಡಿಯಾಗುತ್ತದೆ ಎಂದು ಕದ್ದು ಮುಚ್ಚಿ ಹಿಂದೂ ಎಂದು ಹೇಳಿಕೊಳ್ಳುವವರೂ ಇದ್ದಾರೆ ಎಂದು ತಿಳಿಸಿದರು.