ಬೆಂಗಳೂರು, ಅ.11(Daijiworld News/SS): ನೆರೆ ಪರಿಹಾರ ಸಂಬಂಧ ವಿರೋಧ ಪಕ್ಷಗಳ ಸಭೆ ಕರೆಯಿರಿ. ನಮ್ಮ ಸಲಹೆ ಕೇಳಿ, ನಾವು ಸಲಹೆ ಕೊಡ್ತೀವಿ ಎಂದು ಯಡಿಯೂರಪ್ಪಗೆ ಮಾಜಿ ಸಿಎಂ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.
ರಾಜ್ಯದ ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಕಡಿಮೆ ಪರಿಹಾರ ಹಣ ಕೊಟ್ಟಿದೆ ಎಂದು ನಾನು ಆರೋಪಿಸಿಲ್ಲ. ಕೇಂದ್ರ ಸರ್ಕಾರ ನಿಯಮಾವಳಿ ಪ್ರಕಾರವೇ ಹಣ ಕೊಟ್ಟಿದೆ. ಪ್ರತಿ ರಾಜ್ಯಕ್ಕೆ ಇಂತಿಷ್ಟು ಹಣವನ್ನು ನೀಡಬೇಕೆಂಬ ನಿಯಮವಿದೆ. ಇದಕ್ಕಿಂತಾ ಹೆಚ್ಚಿನ ಹಣ ಕೊಡಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಿಲ್ಲ ಎಂದು ನಾನು ಹೇಳಿದ್ದೆ ಎಂದು ಸಮರ್ಥನೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಪ್ರತಿ ರಾಜ್ಯಕ್ಕೂ ಇಂತಿಷ್ಟು ಹಣ ಹಂಚಿಕೆ ಮಾಡಬೇಕೆಂಬ ನಿಯಮವಿದೆ. ಹೀಗಾಗಿ, ಕೇಂದ್ರದ ಪರಿಹಾರ ಕಡಿಮೆಯಾಗಿದ್ದರೆ ತಾವು ಬಜೆಟ್ನಲ್ಲಿ ಮಿಕ್ಕ ಹಣವನ್ನು ಪರಿಹಾರ ಕಾರ್ಯಕ್ಕೆ ಬಳಸಿ ಎಂದು ಯಡಿಯೂರಪ್ಪಗೆ ಕುಮಾರಸ್ವಾಮಿ ಕಿವಿಮಾತು ಹೇಳಿದರು.
ಬಜೆಟ್ನಲ್ಲಿ ಯಾವ ಯೋಜನೆಯಡಿ ಎಷ್ಟು ಹಣ ಮಿಕ್ಕಿದೆ ಎಂದು ಅಧಿಕಾರಿಗಳ ಜೊತೆ ಚರ್ಚಿಸಿ. ಹೃದಯವೈಶಾಲ್ಯತೆ ತೋರಿಸಿ. ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಗಡುಸು ಧ್ವನಿಯಲ್ಲಿ ಮಾತನಾಡಬೇಡಿ ಎಂದು ಹೇಳಿದ್ದಾರೆ.