ತಿರುವನಂತಪುರಂ, ಅ 8 (Daijiworld News/RD): ತನ್ನ ಗಂಡನನ್ನು, ಆತನ ಹೆತ್ತವರು ಹಾಗೂ ಕುಟುಂಬದ ಇತರ ಮೂವರು ಸದಸ್ಯರನ್ನು 14 ವರ್ಷಗಳ ಅವಧಿಯಲ್ಲಿ ಯಾರಿಗೂ ಸಂಶಯ ಬಾರದಂತೆ ಆಹಾರದಲ್ಲಿ ಸಯನೈಡ್ ಬೆರೆಸಿ ಕೊಂದ ಹಂತಕಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಕೋಯಿಕ್ಕೋಡ್ ಸಮೀಪದ ಕೂಡತ್ತಾಯಿ ಎಂಬಲ್ಲಿ 2002ರಿಂದ 2016ರ ಅವಧಿಯಲ್ಲಿ ಈ ಹತ್ಯೆಗಳು ನಡೆದಿವೆ.
ಹಂತಕಿ ಜೋಲಿ ಜೋಸೆಫ್, ಆಕೆಯ ಸಹಾಯಕರಾದ ಎಂ.ಎಸ್. ಮ್ಯಾಥ್ಯೂ, ಪ್ರಾಜಿ ಕುಮಾರ್ ಬಂಧಿತರು. 2011ರಲ್ಲಿ ನಡೆದ ಜೋಲಿ ಪತಿ ರಾಯ್ ಹತ್ಯೆ ಪ್ರಕರಣದಲ್ಲಿ ಇವರನ್ನು ಬಂಧಿಸಲಾಗಿದೆ. ಶವಗಳನ್ನು ಹೊರತೆಗೆದು ಪರಿಶೀಲನೆಗೆ ಒಳಪಡಿಸಲಾಗಿದೆ.
'ಪೊಟ್ಯಾಸಿಯಂ ಸಯನೈಡ್ ಸೇವಿಸಿ ರಾಯ್ ಮೃತಪಟ್ಟಿದ್ದರು. ಆದರೆ ಇದುವರೆಗೆ ಅದನ್ನು ಆತ್ಮಹತ್ಯೆ ಎಂದು ನಂಬಲಾಗಿತ್ತು. ಎಲ್ಲ ಕೊಲೆಗಳಿಗೆ ಜೋಲಿ ಸಂಚು ರೂಪಿಸಿದ್ದಳು. ಕುಟುಂಬದ ಪೂರ್ವಜರ ಆಸ್ತಿ ಮೇಲೆ ಆಕೆ ಕಣ್ಣಿಟ್ಟಿದ್ದಂತೆ ತೋರುತ್ತದೆ ಎಂದು ಕೋಯಿಕ್ಕೋಡ್ ಗ್ರಾಮೀಣ ವಿಭಾಗದ ಎಸ್ಪಿ ಕೆ.ಜಿ. ಸಿಮನ್ ಹೇಳಿದ್ದಾರೆ.
2002ರಲ್ಲಿ ಅತ್ತೆ ಅಣ್ಣಮ್ಮ ಹತ್ಯೆಯೊಂದಿಗೆ ಸರಣಿ ಕೊಲೆ ಆರಂಭವಾಗಿತ್ತು. ಮಾವ ಟಾಮ್ ಥಾಮಸ್, ಗಂಡ ರಾಯ್ ಥಾಮಸ್, ಅಣ್ಣಮ್ಮ ಅವರ ಸಹೋದರ ಮ್ಯಾಥ್ಯೂ, ರಾಯ್ ಸಂಬಂಧಿ ಶಾಜು ಅವರ ಮಗಳು 1 ವರ್ಷದ ಆಲ್ಫೈನ್, ಮತ್ತು ಶಾಜು ಅವರ ಪತ್ನಿ ಸಿಲಿ ಕೊಲೆಯಾಗಿದ್ದರು.ಇವರು ಊಟ ಮಾಡಿದ ಕೆಲವೇ ಹೊತ್ತಿನಲ್ಲಿ ಕುಸಿದುಬಿದ್ದು ಮೃತಪಟ್ಟಿದ್ದಾರೆ. ರಾಯ್ ಅವರ ಮರಣೋತ್ತರ ಪರೀಕ್ಷೆ ಮಾತ್ರ ನಡೆದಿದ್ದು, ಅವರ ದೇಹದಲ್ಲಿ ಸಯನೈಡ್ ಅಂಶ ಪತ್ತೆಯಾಗಿತ್ತು. ಆದರೆ ಆತ್ಮಹತ್ಯೆ ಎಂದು ಪ್ರಕರಣ ಮುಕ್ತಾಯವಾಗಿತ್ತು.ಕುಟುಂಬದ ಆಸ್ತಿಗಾಗಿ ಖೊಟ್ಟಿ ದಾಖಲೆ ಸೃಷ್ಟಿಸಲು ಜೋಲಿ ಯತ್ನಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ರಾಯ್ ಅವರ ಸಹೋದರ ರೋಜೊ ದೂರು ನೀಡಿದ್ದರು. ಆ ಬಳಿಕ ಸಾವಿನ ಪ್ರಕರಣಗಳ ಬಗ್ಗೆ ಹೊಸದಾಗಿ ತನಿಖೆ ಆರಂಭಿಸಲಾಗಿತ್ತು.
'ಮನೆ ಮೇಲೆ ನಿಯಂತ್ರಣ ಸಾಧಿಸಲು ಅತ್ತೆಯನ್ನು ಜೋಲಿ ಹತ್ಯೆ ಮಾಡಿದ್ದಳು. ಪತಿ ರಾಯ್ಗೆ ಈಗಾಗಲೇ ಆಸ್ತಿಯ ಪಾಲನ್ನು ನಗದು ರೂಪದಲ್ಲಿ ನೀಡಿರುವುದರಿಂದ ಮತ್ತೆ ಆಸ್ತಿ ನೀಡಲು ಮಾವ ನಿರಾಕರಿಸಿದ್ದು ಅವರ ಕೊಲೆಗೆ ಕಾರಣವಾಯಿತು. ದಂಪತಿ ಮಧ್ಯೆ ಸಂಬಂಧದಲ್ಲಿ ಬಿರುಕು ಬಿಟ್ಟ ಕಾರಣ ರಾಯ್ ಹತ್ಯೆ ನಡೆದಿರಬಹುದು. ಆದರೆ ಶಾಜು ಮತ್ತು ಚಿಕ್ಕ ಮಗುವಿನ ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಬಳಿಕ ಜೋಲಿಯನ್ನು ಮದುವೆಯಾಗಿದ್ದ ಶಾಜು, ಈ ಸರಣಿ ಹತ್ಯೆಯಲ್ಲಿ ಯಾವ ಪಾತ್ರ ವಹಿಸಿದ್ದಾರೆ ಎಂಬ ಬಗ್ಗೆ ಸದ್ಯಕ್ಕೆ ಪುರಾವೆಗಳು ಲಭ್ಯವಾಗಿಲ್ಲ' ಎಂದು ಪೊಲೀಸರು ತಿಳಿಸಿದ್ದಾರೆ.