ಬೆಂಗಳೂರು, ಸೆ 24 (Daijiworld News/MSP): ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆ ಘೋಷಣೆ ಪ್ರಕಟವಾದ ಬೆನ್ನಲ್ಲೆ ದೋಸ್ತಿಗಳಾಗಿದ್ದವರು ಶತ್ರುಗಳಂತೆ ಹೇಳಿಕೆ ನೀಡಲು ಪ್ರಾರಂಭಿಸಿದ್ದಾರೆ. ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವೆ ವಾಕ್ಸಮರ ಆರಂಭವಾಗಿದೆ.
" ಲೋಕಸಭೆ ಚುನಾವಣೆಯಲ್ಲಿ ಕೆಲವು ಕಾಂಗ್ರೆಸ್ ನಾಯಕರು ಬಿಜೆಪಿ ಜತೆ ಸೇರಿ ಮೈತ್ರಿಕೂಟದ ಅಭ್ಯರ್ಥಿಗಳನ್ನು ಸೋಲಿಸಿದರು. ಆದರೆ ಇಂತಹವರು ಈಗ ಸ್ವಾಭಿಮಾನದ ಭಾಷಣ ಮಾಡುತ್ತಿದ್ದಾರೆ. ಇಂತಹ ರಾಜಕಾರಣ ಮಾಡುವವರಿಗೆ ನಾಚಿಕೆಯಾಗಬೇಕು. ಮಾತ್ರವಲ್ಲದೆ ಸೋಲಿಗೆ ಸಿದ್ದರಾಮಯ್ಯ ಸಾಕಿದ ಮುದ್ದಿನ ಗಿಣಿಗಳೇ ಕಾರಣ'' ಎಂದು ಸೋಮವಾರ ತಾನೇ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದ್ದರು.
ತುಮಕೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಸೋಲು, ಮಂಡ್ಯದಲ್ಲಿ ನಿಖಿಲ್ ಸೋಲು, ಕೋಲಾರದಲ್ಲಿ ಕೆ.ಎಚ್.ಮುನಿಯಪ್ಪ ಅವರ ಸೋಲಿಗೆ ಯಾರು ಕಾರಣ? ಮೈಸೂರಿನಲ್ಲಿಕಾಂಗ್ರೆಸ್ ಅಭ್ಯರ್ಥಿ ಸೋಲಿಗೂ ಸಿದ್ದರಾಮಯ್ಯ ಅವರ ಸ್ವಯಂಕೃತ ಅಪರಾಧ ಕಾರಣ ಎಂದು ಕುಮಾರಸ್ವಾಮಿ ಸಿದ್ದು ವಿರುದ್ದ ವಾಗ್ದಾಳಿ ನಡೆಸಿದ್ದರು.
ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಕುಮಾರಸ್ವಾಮಿ ವಿರುದ್ದ ಟ್ವೀಟ್ ಮೂಲಕ ಆರೋಪ ಮಾಡಿದ್ದು, " ಹೌದು, ನಾನೇ ನಂಬಿದ ಗಿಣಿಗಳು ಹದ್ದಾಗಿ ಕಾಡಿದ್ದು ನಿಜ, ನನ್ನದೇ ತಪ್ಪು, ನಾಲ್ಕು ದಶಕಗಳ ರಾಜಕೀಯ ಒಟನಾಟದ ಅನುಭವದ ನಂತರವೂ ಹದ್ದನ್ನು ಗಿಣಿಯೆಂದು ಭ್ರಮಿಸಿ ಮೈತ್ರಿ ಮಾಡಿಕೊಂಡೆವು, ಕುಕ್ಕದೇ ಬಿಡುತ್ತಾ? ಅನುಭವಕ್ಕಿಂತ ದೊಡ್ಡ ಪಾಠ ಏನಿದೆ ಹೇಳಿ? ಎಂದು ತಿರುಗೇಟು ನೀಡಿದ್ದಾರೆ.