ಬೆಂಗಳೂರು, ಸೆ.04(Daijiworld News/SS): ನೂತನ ಸಂಚಾರಿ ನಿಯಮಾನುಸಾರ ರಾಜ್ಯದಲ್ಲಿ ಇಂದಿನಿಂದ ಪರಿಷ್ಕೃತ ದಂಡ ವಿಧಿಸಲು ಪೊಲೀಸರು ಸಜ್ಜಾಗಿದ್ದು, ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರಿ ಮೊತ್ತದ ದಂಡ ಬೀಳಲಿದೆ. ಟ್ರಾಫಿಕ್ ನಿಯಮ ಉಲ್ಲಂಘನೆ ಕುರಿತ ಮೋಟಾರು ವಾಹನ ಕಾಯ್ದೆಯನ್ನು ಅಧಿಕೃತವಾಗಿ ರಾಜ್ಯ ಸರ್ಕಾರ ಜಾರಿಮಾಡಿದೆ.
ಈಗಾಗಲೇ ಹೊಸ ಟ್ರಾಫಿಕ್ ರೂಲ್ಸ್ ಜಾರಿಗೆ ಬಂದಿದ್ದು, ವಾಹನ ಸವಾರರು ಎಚ್ಚರ ವಹಿಸಬೇಕಿದೆ. ಒಂದು ವೇಳೆ ಟ್ರಾಫಿಕ್ ನಿಯಮವನ್ನು ಪಾಲಿಸಲಿಲ್ಲ ಎಂದರೆ ಭಾರೀ ದಂಡ ಕಟ್ಟಲು ಸವಾರರು ಸಿದ್ಧವಾಗಿರಬೇಕು. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವ ವಾಹನ ಸವಾರರ ಮೇಲೆ ಟ್ರಾಫಿಕ್ ಪೊಲೀಸರು ಕಣ್ಣಿಟ್ಟು ಇಂದಿನಿಂದ ಎಲ್ಲೆಡೆ ಫೈನ್ ಹಾಕಲಿದ್ದಾರೆ.
ಇತ್ತೀಚೆಗಷ್ಟೆ ಕೇಂದ್ರ ಸಚಿವ ಸಂಪುಟದ ಅನುಮೋದನೆ ಸಿಕ್ಕಿದ ಬೆನ್ನಲೇ ಕರ್ನಾಟಕ ಮೋಟಾರ್ ವಾಹನ ಕಾಯ್ದೆಯಲ್ಲೂ ತಿದ್ದುಪಡಿ ಮಾಡಿ ಜಾರಿ ಮಾಡಲಾಗಿತ್ತು. ಸೆ.3ರಿಂದಲೇ ಹೊಸ ನಿಯಮ ಜಾರಿಗೊಳಿಸಿ ರಾಜ್ಯ ಸರ್ಕಾರದ ಆದೇಶ ಹೊರಡಿಸಿರುವ ಬಗ್ಗೆ ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರವೀಕಾಂತೆಗೌಡ ತಿಳಿಸಿದರು.
ನೂತನ ಕಾಯ್ದೆ ಪ್ರಕಾರ, ಆ್ಯಂಬುಲೆನ್ಸ್ ನಂತಹ ತುರ್ತು ವಾಹನಗಳಿಗೆ ದಾರಿ ಬಿಡದೇ ಇದ್ದರೆ 10,000 ರೂ. ದಂಡ ವಿಧಿಸಲು ಅವಕಾಶವಿದೆ. ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ರೂ. 500, ಲೈಸೆನ್ಸ್ ಇಲ್ಲದೆ ಚಾಲನೆ ಮಾಡಿದರೆ ರೂ. 5,000, ವಿಮೆ ಇಲ್ಲದಿದ್ದರೆ ರೂ. 2,000, ವೇಗದ ಚಾಲನೆಗೆ ರೂ. 2,000, ಸೀಟ್ ಬೆಲ್ಟ್ ಇಲ್ಲದಿದ್ದರೆ ರೂ. 1,000, ಹೆಲ್ಮೆಟ್ ರಹಿತ ಚಾಲನೆಗೆ ರೂ. 1,000, ಮದ್ಯಸೇವಿಸಿ ಚಾಲನೆಗೆ ರೂ. 10,000, ದ್ವಿಚಕ್ರವಾಹನದಲ್ಲಿ ಓವರ್ಲೋಡಿಂಗ್ (ಇಬ್ಬರಗಿಂತ ಹೆಚ್ಚು ಮಂದಿ ಪ್ರಯಾಣಿಸಿದರೆ) ಮಾಡಿದರೆ ರೂ. 2,000 ಈ ರೀತಿಯಾಗಿ ದಂಡ ವಿಧಿಸಲಾಗುತ್ತದೆ.