ಕೊಪ್ಪಳ,ಆ 18 (Daijiworld News/RD): ವಸತಿ ನಿಲಯವೊಂದರಲ್ಲಿ ವಿದ್ಯುತ್ ಸ್ಪರ್ಶಿಸಿ ಐವರು ವಿದ್ಯಾರ್ಥಿಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ಕೊಪ್ಪಳದ ನಗರದ ಬನ್ನಿಕಟ್ಟಿ ಪ್ರದೇಶದಲ್ಲಿರುವ ದೇವರಾಜ ಅರಸ್ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
10ನೇ ತರಗತಿಯ ಮೆಟಗಲ್ ನಿವಾಸಿ ಮಲ್ಲಿಕಾರ್ಜುನ ಮತ್ತು ಲಿಂಗದಹಳ್ಳಿ ನಿವಾಸಿ ಬಸವರಾಜ, 9ನೇ ತರಗತಿಯ ಹಲಗೇರಿಯ ದೇವರಾಜ, ಹೈದರ್ ನಗರದ ಕುಮಾರ್, 8ನೇ ತರಗತಿಯ ಲಾಚನಕೇರಿ ನಿವಾಸಿ ಗಣೇಶ್ ಮೃತ ವಿದ್ಯಾರ್ಥಿಗಳು.
ವಸತಿ ನಿಲಯದಲ್ಲಿ ಇತ್ತೀಚೆಗೆ ಧ್ವಜಾರೋಹಣ ನಡೆಸಲಾಗಿತ್ತು. ಧ್ವಜಾರೋಹಣ ಕಂಬವನ್ನು ಬ್ಯಾರಲ್ ನಲ್ಲಿ ಇಡಲಾಗಿತ್ತು. ಆ ಬ್ಯಾರಲ್ ಗೆ ವಿದ್ಯುತ್ ತಂತಿ ತಾಗಿದ್ದು, ಇದನ್ನು ಗಮನಿಸದೇ ವಿದ್ಯಾರ್ಥಿಗಳು ಕಂಬವನ್ನು ಕೆಳಗೆ ಇಳಿಸಲು ಮುಂದಾಗಿದ್ದಾಗ ವಿದ್ಯುತ್ ಸ್ಪರ್ಶಸಿ ಐವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಕೊಪ್ಪಳ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.